Connect with us

DAKSHINA KANNADA

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮರಶ್ಮಿ”. ಯುವಜನಾಂಗ ಮೌಲ್ಯಭರಿತರಾದಾಗ ಭಾರತ ವಿಶ್ವಗುರು- ಡಾ.ಹೆಚ್ ಮಾಧವ ಭಟ್.

ಪುತ್ತೂರು ಡಿಸೆಂಬರ್ 21  ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ “ಸಂಭ್ರಮರಶ್ಮಿ” ದ.20ರಂದು ಶೀಂಟೂರು ನಾರಾಯಣ ರೈ ತೆರೆದ ಸಭಾಂಗಣದಲ್ಲಿ ಜರಗಿತು. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಹೆಚ್ ಮಾಧವ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಪೇಟೆ ಪಟ್ಟಣದಲ್ಲಿರುವ ಸಿಗುವಂತ ಉನ್ನತ ಮಟ್ಟದ ಶಿಕ್ಷಣ ಈ ಹಳ್ಳಿಯ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲು ಕಾರಣಕರ್ತರಾದ ಶೀಂಟೂರು ನಾರಾಯಣ ರೈಯವರನ್ನು ಇವತ್ತು ನಾವು ಸ್ಮರಿಸಬೇಕು. ಅವರ ಕನಸ್ಸನ್ನು ನನಸಾಗಿಸಿ ಶಿಕ್ಷಣ ಸಂಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿದವರು ಸವಣೂರು ಸೀತಾರಾಮ ರೈಯವರು. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಅತ್ಯಂತ ಸುರಕ್ಷಿತವಾಗಿರುವುದರಿಂದ ಪರವೂರಿನಿಂದಲೂ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ನಮ್ಮ ಮಕ್ಕಳನ್ನು ಕೌಶಲ್ಯಭರಿತರಾಗಿ, ಮೌಲ್ಯಭರಿತರಾಗಿ ಮಾಡಿದಾಗ ನಮ್ಮ ದೇಶ ವಿಶ್ವಗುರುವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಸಂಚಾರಿ ಪೊಲೀಸ್ ಕಮಿಷನ‌ರ್ ನಝಾ ಫರೂಕಿ ಮಾತನಾಡಿ ಎಲ್ಲಾ ಸಾಧನೆಗಳಲ್ಲಿ ಶ್ರೇಷ್ಠ ಸಾಧನೆ ಅಂದರೆ ಅದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಂತದ್ದು. ಅಂತಹ ಸಾಧನೆಯನ್ನು ಇವತ್ತು ಸೀತಾರಾಮ ರೈಯವರು ಮಾಡಿ ತೋರಿಸಿದ್ದಾರೆ ಎಂದರು. ಕರಾವಳಿ ಜಿಲ್ಲೆಯು ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಶೈಕ್ಷಣಿಕವಾಗಿ ಹೆಣ್ಣು ಮಕ್ಕಳು ಮುಂದೆ ಬರಬೇಕು, ಕ್ರೀಡಾಕೂಟದ ಅಡಿಯಲ್ಲಿ ಉದ್ಯೋಗ ಅವಕಾಶ ಹೇರಳವಾಗಿರುವುದರಿಂದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು. ಪ್ರತಿಯೊಬ್ಬರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಹೇಳಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ 2ನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ ನನ್ನ ತಂದೆಯವರಾದ ಶೀಂಟೂರು ನಾರಾಯಣ ರೈವರ ಆಶಯದಂತೆ ಸವಣೂರಿನಲ್ಲಿ 2001ರಲ್ಲಿ ಏಕಕಾಲದಲ್ಲಿ ಎಲ್‌.ಕೆ.ಜಿ, 1ನೇ ತರಗತಿ, 8ನೇ ತರಗತಿ ಮತ್ತು ಪ್ರಥಮ ಪಿಯುಸಿಯನ್ನು ಏಕಕಾಲದಲ್ಲಿ ಆರಂಭಿಸಿದೆ. ಪುತ್ತೂರು, ಮಂಗಳೂರು, ಮೈಸೂರು ಹೀಗೆ ಪಟ್ಟಣಗಳಲ್ಲಿ ಸಿಗುವಂತ ಉನ್ನತ ಶಿಕ್ಷಣ ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೂ ಸಿಗಬೇಕೆನ್ನುವ ಉದ್ದೇಶದಿಂದ 22 ಎಕ್ರೆ ಜಾಗದಲ್ಲಿ ಒಂದೊಂದೇ ವಿಭಾಗಗಳನ್ನು ಸ್ಥಾಪಿಸುತ್ತಾ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಕಲ್ಪಿಸಿದ್ದೇನೆ. ಸುಮಾರು 380 ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿ ನಿಲಯದಲ್ಲಿದ್ದಾರೆ. ಕಲಿಕೆಗೆ ಪೂರಕ ಸಾಧನಗಳಾದ ಸ್ಮಾರ್ಟ್ ಕ್ಲಾಸ್, ಇ-ಬೋರ್ಡ್, ಶಾಲಾ ಬಸ್ ಹೀಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದರು.

ವೇದಿಕೆಯಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ,ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸವಣೂರು ಎನ್. ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ,ವಿದ್ಯಾರಶ್ಮಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ,ಕೆ.ಎಲ್, ವಿದ್ಯಾರ್ಥಿ ನಾಯಕಿ ಕೆ. ಯಶಸ್ವಿ ರೈ, ಮತ್ತಿತ್ತರರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶೀಂಟೂರು ನಾರಾಯಣ ರೈಯವರ ಪ್ರತಿಮೆಗೆ ಹಾರಾರ್ಪಣೆ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಹಕರಿಸಿದರು. ಪೋಷಕರು, ಸಂಸ್ಥೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *