LATEST NEWS
ಬಿಲ್ಲವ ಸಮುದಾಯದ ಭಾವನೆಗಳ ಜೊತೆ ಚೆಲ್ಲಾಟ ಆಡಿದರೆ ತಕ್ಕ ಉತ್ತರ ಈ ಚುನಾವಣೆಯಲ್ಲಿ ನೀಡಲಿದೆ – ಸತ್ಯಜಿತ್ ಸುರತ್ಕಲ್

ಮಂಗಳೂರು ಎಪ್ರಿಲ್ 14: ಗಣರಾಜ್ಯೋತ್ಸವ ಸಂದರ್ಭ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರ ವನ್ನು ನಿರಾಕರಿಸಿದ್ದ ಕೇಂದ್ರ ಬಿಜೆಪಿ ಸರಕಾರಕ್ಕೆ ಇದೀಗ ಚುನಾವಣೆ ಬಂದಾಗ ನಾರಾಯಣ ಗುರುಗಳು ನೆನಪಾಗುತ್ತಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಎರಡು ವರ್ಷದ ಹಿಂದೆ ಮಹಿಳಾ ಸಬಲೀಕರಣ ವಿಚಾರದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ಗೆ ಅಳತೆ ಸರಿಯಿಲ್ಲ ಎಂದು ಗಣರಾಜ್ಯೋತ್ಸವ ಪರೇಡ್ ನಿಂದ ಟ್ಯಾಬ್ಲೋ ರಿಜೆಕ್ಟ್ ಮಾಡಿದ್ರು . ಕೊನೆಗೆ ಯಾವ ಅಳತೆ ಸರಿಯಲ್ಲ ಎಂದು ಮಾಹಿತಿ ನೀಡಲಿಲ್ಲ , ಬರುವ ವರ್ಷದ ಪರೇಡ್ ಗೆ ನಾವೇ ಗುರುಗಳ ಟ್ಯಾಬ್ಲೋ ಮಾಡಿ ಕಲಿಸುತ್ತೇವೆ ಅಂದಿದ್ರು, ಅಲ್ಲದೆ ಟ್ಯಾಬ್ಲೋ ನಿರಾಕರಣೆಯ ವಿರುದ್ಧ ನಡೆದ ಹೋರಾಟದಲ್ಲೂ ಯಾವ ಬಿಜೆಪಿ ನಾಯಕರು ಹೆಜ್ಜೆ ಹಾಕಲಿಲ್ಲ ಇದೀಗ ಬಿಜೆಪಿಯವರಿಗೆ ಚುನಾವಣೆ ಸಮಯದಲ್ಲಿ ನಾರಾಯಣ ಗುರುಗಳು ನೆನಪಾಗುತ್ತಿದ್ದಾರೆ ಎಂದರು.

ಸಮುದಾಯದ ಭಾವನೆ ಜೊತೆ ಚೆಲ್ಲಾಟವಾಡಿದರೆ ಅದಕ್ಕೆ ತಕ್ಕ ಉತ್ತರವನ್ನು ಸಮಾಜ ಈ ಬಾರಿಯ ಚುನಾವಣೆಯಲ್ಲಿ ನೀಡಲಿದೆ. ಬಿಲ್ಲವ ಸಮಾಜ ಮುಗ್ಧ ಮತ್ತು ನಂಬಿಕಸ್ಥ ಸಮಾಜ. ಭಾವನಾತ್ಮಕವಾಗಿ ಚೆಲ್ಲಾಟವಾಡಬಹುದು ಎಂದು ಸ್ಥಳೀಯ ನಾಯಕರು ಭಾವಿಸಿದ್ದರೆ ಅದು ಇನ್ನು ಮುಂದೆ ಸಾಧ್ಯವಿಲ್ಲ. ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುತ್ತಿದ್ದೇವೆ. ಸಮಾಜದಲ್ಲಿ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚುನಾವಣೆ ಫಲಿತಾಂಶದಿಂದ ನಿರ್ಧಾರ ಆಗಲಿದೆ ಎಂದು ಸತ್ಯಜಿತ್ ಹೇಳಿದರು.