LATEST NEWS
ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ರಾಜ್ಯ ಸರಕಾರದ ಇಬ್ಬಗೆ ನೀತಿ ತೋರಿಸುತ್ತದೆ – ಸಿ.ಟಿ ರವಿ
ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ರಾಜ್ಯ ಸರಕಾರದ ಇಬ್ಬಗೆ ನೀತಿ ತೋರಿಸುತ್ತದೆ – ಸಿ.ಟಿ ರವಿ
ಮಂಗಳೂರು ನವೆಂಬರ್ 14: ರಾಜ್ಯದ ಸಮ್ಮಿಶ್ರ ಸರಕಾರ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಹಿಂದೂ ದೇವರು, ಧಾರ್ಮಿಕ ಮುಖಂಡರ ವಿರುದ್ಧ ಅವಹೇಳನ ಮಾಡಿ ಬೈಯುವವರಿಗೆ ಒಂದು ನೀತಿ, ಟಿಪ್ಪುವಿನ ವಾಸ್ತವಾಂಶ ತೋರಿಸಿದವರಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಸಂತೋಷ್ ಬಂಧನವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಟಿಪ್ಪು ಕುರಿತು ಸಂತೋಷ್ ತಮ್ಮಯ್ಯ ಗೋಣಿಗೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿದ ಅವರನ್ನು ಮಧ್ಯರಾತ್ರಿ ಬಂಧಿಸಿ ಸರಕಾರ ತನ್ನ ಸಾಮರ್ಥ್ಯ ತೋರಿದೆ ಎಂದು ಸಿ.ಟಿ ರವಿ ಆರೋಪಿಸಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವ ರೀತಿಯಲ್ಲಿ ಸೀಮಿತವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದರು.
ಈ ಹಿಂದೆ ರಾಮನ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಟೀಕಿಸಿದ್ದ ಪ್ರೋ. ಭಗವಾನ್, ಮಹೇಶ್ಚಂದ್ರ, ಯೋಗೇಶ್ ಮಾಸ್ಟರ್, ಗಿರೀಶ್ ಕಾರ್ನಾಡ್‌ರನ್ನು ಬಂಧಿಸದ ರಾಜ್ಯ ಸರಕಾರ ಈಗ ಟಿಪ್ಪುವಿನ ಕುರಿತು ಹೇಳಿಕೆ ನೀಡಿದ್ದ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿದೆ ಎಂದು ಆರೋಪಿಸಿದರು. ಅಸಹಿಷ್ಣುತೆ ಎಂದು ಹೇಳುತ್ತಿದ್ದ ಬುದ್ದಿಜೀವಿಗಳು ಪತ್ರಕರ್ತ ಸಂತೋಷ್ ಬಂಧನದ ವೇಳೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರಕಾರವಿದ್ದಾಗ ಎಸಿಬಿ ಬಳಸಿ ಭ್ರಷ್ಟರನ್ನು ಉಳಿಸುತ್ತಿದ್ದರು. ಈಗ ಸಮ್ಮಿಶ್ರ ಸರಕಾರ ಸಿಸಿಬಿ- ಸಿಒಡಿಗಳನ್ನು ಕೂಡಾ ದುರ್ಬಳಕೆ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ ಎಂದು ಹೇಳಿದರು.