DAKSHINA KANNADA
ಸಂಘಟನೆಗಿಂತ ನಾನೇ ಮಿಗಿಲು ಎಂದವರನ್ನು ಸಂಘ ಸಾಕಷ್ಟು ನೋಡಿದೆ: ಭಜರಂಗದಳ

ಪುತ್ತೂರು, ಎಪ್ರಿಲ್ 28: ಸಂಘಟನೆಗಿಂತ ನಾನೇ ಮಿಗಿಲು ಎಂದ ಸಾಕಷ್ಟು ನಾಯಕರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಂಡಿದ್ದು, ಇದರಲ್ಲಿ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯೂ ಸೇರಿಕೊಳ್ಳುತ್ತಾರೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವ್ಯಕ್ತಿ ನಿರ್ಮಾಣ ಕಾರ್ಯವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ ಸಂಘದ ಚೌಕಟ್ಟನ್ನು ಮೀರಿ ಸಂಘದಿಂದ ಹೊರ ನಡೆದ ನಡೆದ ಹಲವಾರು ಮಹಾನ್ ನಾಯಕರು ದೇಶದಲ್ಲಿದ್ದಾರೆ.

ಕಲ್ಯಾಣ್ ಸಿಂಗ್ , ಪ್ರವೀಣ್ ತೊಗಾಡಿಯಾ ಮೊದಲಾದವರೇ ಸಂಘವನ್ನು ಬಿಟ್ಟು ಹೊರ ನಡೆದಿದ್ದರೂ, ಸಂಘ ತನ್ನ ಚೌಕಟ್ಟಿಗೆ ಬದ್ಧವಾಗಿಯೇ ನಿಂತಿದೆ ಎಂದರು. ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಪಕ್ಷೇತರವಾಗಿ ನಿಂತಿರುವ ಅರುಣ್ ಕುಮಾರ್ ಪುತ್ತಿಲರು ತಾನು ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಮಾಡಿರುವುದೇ ನರೇಂದ್ರ ಮೋದಿ ನೇತೃತ್ವದ ತಂಡ ಅನ್ನೋದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಅವರು ದೇಶದಲ್ಲಿ ಹಿಂದೂಗಳ ಪರವಾಗಿ ನಿಂತ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ.
ಕಾಂಗ್ರೇಸ್ ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಶೇಧ ಕಾಯ್ದೆ, ಮತಾಂತರ ತಡೆ ಕಾಯ್ದೆಯನ್ನು ವಾಪಾಸು ಪಡೆಯುವುದಾಗಿ ಹೇಳಿದ್ದು, ಈ ಕಾರಣಕ್ಕಾಗಿ ಹಿಂದೂಗಳೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.