KARNATAKA
ಕಿಚ್ಚ ಸುದೀಪ್ ಸರ್..ಬಿಗ್ ಬಾಸ್ ಮನೆ ಸುರಕ್ಷತೆಯ ಸ್ವರ್ಗ ಅಂತ ಹೇಳಿದ್ದೀರಿ..ಆದರೆ ಈಗ..ಸಂಗೀತಾ ಸಹೋದರ ಬಹಿರಂಗ ಅಸಮಧಾನ
ಬೆಂಗಳೂರು ಡಿಸೆಂಬರ್ 09:ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸ್ಪರ್ಧೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬಿಗ್ ಬಾಸ್ ನಲ್ಲಿ ನಡೆದ ಟಾಸ್ಕ್ ವೊಂದರಲ್ಲಿ ರಾಕ್ಷಸರ ತಂಡದ ಕ್ರೌರ್ಯಕ್ಕೆ ಇಬ್ಬರು ಸ್ಪರ್ಧಿಗಳು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂದಿದೆ. ಈ ನಡುವೆ ಸ್ಪರ್ಧಿ ಸಂಗೀತಾ ಶೃಂಗೇರಿ ಸಹೋದರ ಬಿಗ್ ಬಾಸ್ ವಿರುದ್ದ ಬಹಿರಂಗವಾಗಿ ತಮ್ಮ ಅಸಮಧಾನ ಹೊರಹಾಕಿದ್ದಾರೆ.
‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ‘ರಾಕ್ಷಸರು ವರ್ಸಸ್ ಗಂಧರ್ವರು’ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಕೆಲವರು ಅಕ್ಷರಶಃ ರಾಕ್ಷಸರಂತೆಯೇ ವರ್ತಿಸಿದರು. ಅದರಲ್ಲೂ ‘ಚೇರ್ ಆಫ್ ಥಾರ್ನ್ಸ್’ ಚಟುವಟಿಕೆಯಲ್ಲಿ ವರ್ತೂರು ಸಂತೋಷ್, ವಿನಯ್ & ಟೀಮ್ ಜಿದ್ದಿಗೆ ಬಿದ್ದು, ಹಗೆ ಸಾಧಿಸಿದರು. ಸಂಗೀತಾ ಮೇಲೆ ರಾಕ್ಷಸರ ತಂಡ ಸೋಪು ನೀರು ಜೋರಾಗಿ ಎರಚಿ, ಶೇವಿಂಗ್ ಫೋಮ್ ಸುರಿದು ದೈಹಿಕ ದಾಳಿ ನಡೆಸಿದರು.
ಟಾಸ್ಕ್ ವೇಳೆ ನಡೆದ ದಾಳಿಯಿಂದಾಗಿ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಆರೋಗ್ಯಕ್ಕೆ ಸಮಸ್ಯೆಯುಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸಂಗೀತಾ ಶೃಂಗೇರಿ ಅವರ ಸಹೋದರ ಸಂತೋಷ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಭರವಸೆ ನೀಡಿದ್ದ ಕಲರ್ಸ್ ಕನ್ನಡ ವಾಹಿನಿ ಹಾಗೂ ಕಿಚ್ಚ ಸುದೀಪ್ ಅವರಿಗೆ ಸಂಗೀತಾ ಅಣ್ಣ ಸಂತೋಷ್ ಕುಮಾರ್ ಖಡಕ್ ಪ್ರಶ್ನೆಗಳನ್ನ ಕೇಳಿದ್ದಾರೆ.
’ಕಿಚ್ಚ ಸುದೀಪ್ ಸರ್.. ನೀವು ನಮಗೆ ಭರವಸೆ ನೀಡಿದ್ರಿ.. “ಬಿಗ್ ಬಾಸ್ ಮನೆ ಸುರಕ್ಷತೆಯ ಸ್ವರ್ಗ. ಏನೂ ಆಗುವುದಿಲ್ಲ ಎಂದು. ಆದರೆ, ಪ್ರಸ್ತುತ ಸನ್ನಿವೇಶವು ಈ ನಂಬಿಕೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಒಂದು ಕಾಲದಲ್ಲಿ ಕೌಟುಂಬಿಕ ಕಾರ್ಯಕ್ರಮವಾಗಿದ್ದ ಈ ಶೋ ಈಗ ಅನಿಯಂತ್ರಿತ ಆಕ್ರಮಣ ಮತ್ತು ಹಿಂಸೆಯ ಅಖಾಡವಾಗಿ ಮಾರ್ಪಟ್ಟಿರುವುದನ್ನು ನೋಡಿದರೆ ಹೃದಯ ಛಿದ್ರವಾಗುತ್ತದೆ. ಕುಟುಂಬಗಳು ಗಾಬರಿಗೊಂಡಿವೆ. ಪರದೆಯ ಮೇಲೆ ಇಂತಹ ಆಕ್ರಮಣಕಾರಿ, ಹಿಂಸೆಯ ನಡವಳಿಕೆಯನ್ನು ನಾವು ಒಟ್ಟಿಗೆ ಕುಳಿತು ಹೇಗೆ ವೀಕ್ಷಿಸಬಹುದೇ?’
” ನಾವ್ ಸುದೀಪ್ ಸರ್ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.
ಕುರ್ಚಿಯಲ್ಲಿ ಕೂತಿದ್ದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ರನ್ನು ಎಬ್ಬಿಸಲು ಸೋಲು, ಡೆಟಾಲ್, ಖಾರದ ಪುಡಿ ಇನ್ನಿತರೆ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಎಸೆದರು. ಇದರಿಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮುಖ, ಕಣ್ಣಿಗೆ ಹಾನಿಯಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಶನಿವಾರ ಸುದೀಪ್ ವಾರದ ಪಂಚಾಯ್ತಿ ನಡೆಸಲಿದ್ದಾರೆ. ಟಾಸ್ಕ್ಗಳಲ್ಲಿ ತಪ್ಪು ಮಾಡಿದವರಿಗೆ ಇಂದು ಶಿಕ್ಷೆಯಾಗುವ ನಿರೀಕ್ಷೆ ಇದೆ.