KARNATAKA
ಸ್ಯಾಂಡಲ್ ವುಡ್ ಡ್ರಗ್ ಕೇಸ್ ಆದಿತ್ಯ ಆಳ್ವ ಬಂಧನ
ಬೆಂಗಳೂರು, ಜನವರಿ 12: ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನನ್ನು ಸೋಮವಾರ ರಾತ್ರಿ ಚೆನ್ನೈನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಆದಿತ್ಯ ಆಳ್ವಾ ತಲೆ ಮರೆಸಿಕೊಂಡಿದ್ದ. ಮುಂಬೈ, ಗೋವಾ ಸೇರಿದಂತೆ ಹಲವು ಕಡೆ ಶೋಧ ನಡೆಸಲಾಗಿತ್ತು.
ನಿರೀಕ್ಷಣಾ ಜಾಮೀನು ಕೋರಿ ಆದಿತ್ಯ ಆಳ್ವಾ ಸಲ್ಲಿಸಿದ್ದ ಅರ್ಜಿ ಕೂಡ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಆದಿತ್ಯ ಆಳ್ವಾ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಜನತಾ ಪರಿವಾರದ ನಾಯಕ ದಿವಂಗತ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಬಾಮೈದ ಕೂಡ. ಹೆಬ್ಬಾಳದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಿದ್ದ ರೆಸಾರ್ಟ್ ನಲ್ಲಿ ಆದಿತ್ಯ ಆಳ್ವಾ ಪೇಜ್ -3 ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಬಂಧಿತ ಡ್ರಗ್ ಪೆಡ್ಲರ್ ವೀರೇನ್ ಖನ್ನಾ, ರಾಹುಲ್ ತೋನ್ಸೆ ಜತೆ ನಿಕಟ ಸಂಪರ್ಕ ಹೊಂದಿದ್ದು, ಇವರು ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು. ನಟಿ ರಾಗಿಣಿ ಸೇರಿದಂತೆ ಪ್ರಮುಖರು ಡ್ರಗ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ವಿದೇಶದಲ್ಲಿ ಓದಿಕೊಂಡಿದ್ದ ಆದಿತ್ಯ ಆಳ್ವಾ ಡ್ರಗ್ ಡೀಲಿಂಗ್ ಕಿಂಗ್ ಪಿನ್ ಗಳ ಜತೆ ನಿಕಟ ಸಂಪರ್ಕ ಹೊಂದಿದ್ದ. ವೀರೇನ್ ಖನ್ನಾ ನೀಡಿದ ಮಾಹಿತಿ ಮೇರೆಗೆ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾ ಒಡೆತನದ ರೆಸಾರ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ಇದೇ ವೇಳೆ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ರೆಸಾರ್ಟ್ ಗೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬ ಸಂಗತಿ ಕೂಡ ಬಯಲಾಗಿತ್ತು.
ಈ ವೇಳೆಗಾಗಲೇ ಆದಿತ್ಯ ಆಳ್ವಾ ತಲೆ ಮರೆಸಿಕೊಂಡಿದ್ದ. ಆದಿತ್ಯ ಸಹೋದರಿ ಪ್ರಿಯಾಂಕಾ ಆಳ್ವಾಗೆ ವಿಚಾರಣೆಗೆ ಹಾಜರಾಗಲುಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಕರೋನಾ ಸೋಂಕು ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಬರಲು ನಿರಾಕರಿಸಿದ್ದರು. ಹೀಗಾಗಿ ಆಳ್ವಾಗಾಗಿ ಶೋಧ ಕಾರ್ಯ ಮುಂದುವರೆದಿತ್ತು.
ಚೆನ್ನೈನಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರ ಒಂದು ತಂಡ ಅಲ್ಲಿಗೆ ತೆರಳಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆಳ್ವಾ ವಿಚಾರಣೆಯಿಂದ ಡ್ರಗ್ ಜಾಲದಲ್ಲಿರುವ ಮತ್ತಷ್ಟು ಹೆಸರು ಹೊರ ಬಂದರೂ ಅಚ್ಚರಿ ಪಡಬೇಕಿಲ್ಲ.