DAKSHINA KANNADA
ಕಾಸರಗೋಡು ಜಿಲ್ಲಾಧಿಕಾರಿ ನಿವಾಸದ ಸಮೀಪದ ಮನೆಯೊಂದರಿಂದ 2.5 ಕೋಟಿ ಮೌಲ್ಯದ ಶ್ರೀಗಂಧ ವಶ

ಕಾಸರಗೋಡು ಅಕ್ಟೋಬರ್ 06 : ಕಾಸರಗೋಡು ಜಿಲ್ಲಾಧಿಕಾರಿಯ ನಿವಾಸದ ಸಮೀಪ ಇರುವ ನಿವಾಸದಲ್ಲಿ ಸುಮಾರು 2.5 ಕೋಟಿ ರೂ ಮೌಲ್ಯ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸಗಳಿಗೆ ಹತ್ತಿರವಿರುವ ಮನೆಯಲ್ಲಿ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ.
ಅಕ್ಟೋಬರ್ 6 ರ ಮಂಗಳವಾರ ಮುಂಜಾನೆ 4.30 ರ ಸುಮಾರಿಗೆ ಜಿಲ್ಲಾಧಿಕಾರಿಯ ಕಾರು ಚಾಲಕ ಶ್ರೀಜಿತ್ ಹಾಗೂ ಗನ್ ಮ್ಯಾನ್‌ಗೆ ಜಿಲ್ಲಾಧಿಕಾರಿಯ ನಿವಾಸದ ಬಳಿಯಲ್ಲಿ ಆದ ಶಬ್ಧಕ್ಕೆ ಎಚ್ಚರವಾಗಿದ್ದು ಅವರು ಹೊರ ಬಂದು ನೋಡಿದಾಗ ನಿಲ್ಲಿಸಿದ ಟ್ರಕ್‌ಗೆ ಶ್ರೀಗಂಧದ ತುಂಡುಗಳನ್ನು ತುಂಬುತ್ತಿರುವುದನ್ನು ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದ್ದು ಸ್ಥಳಕ್ಕೆ ತಲುಪಿದ ಜಿಲ್ಲಾಧಿಕಾರಿ, ಪೊಲೀಸರ ಸಹಾಯದೊಂದಿಗೆ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 30 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಶ್ರೀಗಂಧದ ತುಂಡುಗಳನ್ನು ಟ್ರಕ್‌ನಲ್ಲಿ ತುಂಬಿಸಲಾಗಿತ್ತು. ಸಿಮೆಂಟ್ ಸಾಗಾಟ ಮಾಡುವ ಈ ಟ್ರಕ್‌ನಲ್ಲಿ ಶ್ರೀಗಂಧವನ್ನು ಇರಿಸಲು ಟ್ರಕ್‌ನ ಲಗೇಜ್ ಇಡುವ ಸ್ಥಳದಲ್ಲಿ ವಿಶೇಷ ಕ್ಯಾಬಿನ್‌ನ್ನು ರಚಿಸಲಾಗಿತ್ತು.
ದಾಳಿ ವೇಳೆ ಮನೆಯ ಮಾಲೀಕರು ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ.
ಟ್ರಕ್ ಕರ್ನಾಟಕ ನೋಂದಣಿಯದ್ದಾಗಿದ್ದು ಟ್ರಕ್‌ನೊಂದಿಗೆ ಸ್ಥಳದಲ್ಲಿದ್ದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆ ಮಾಲೀಕ ಅಬ್ದುಲ್ ಖಾದರ್ ಎಂಬಾತನ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.