LATEST NEWS
ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗಲು ಕ್ರಮ – ಸಿಎಂ ಕುಮಾರಸ್ವಾಮಿ
ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗಲು ಕ್ರಮ – ಸಿಎಂ ಕುಮಾರಸ್ವಾಮಿ
ಉಡುಪಿ, ಸೆಪ್ಟಂಬರ್ 7: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೇ, ತ್ವರಿತವಾಗಿ ಮರಳು ಸಿಗುವಂತಾಗಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೆ ಕಟ್ಟುವವರಿಗೆ ಸುಲಭದಲ್ಲಿ ಮರಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಿಯಮಾನುಸಾರ ಜಿಲ್ಲಾಡಳಿತ ಕ್ರಮ ವಹಿಸಿ ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವವರಿಗೆ ಅವಕಾಶ ನೀಡಬೇಕು.
ಯಾವುದೇ ಕಾರಣಕ್ಕೂ ಯಾಂತ್ರಿಕವಾಗಿ ಮರಳುಗಾರಿಕೆಗೆ ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ಮರಳು ದಿಣ್ಣೆಗಳನ್ನು ಗುರುತಿಸುವ ಸಂಬಂಧ ಸುರತ್ಕಲ್ ಎನ್.ಐ.ಟಿ.ಕೆ. ಸಂಸ್ಥೆಯ ತಜ್ಞರ ವರದಿ ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರಾವಳಿಯಲ್ಲಿ ಮರಳು ಸಮಸ್ಯೆ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಹುಡುಕಲು ಶೀಘ್ರದಲ್ಲೇ ಈ ಭಾಗದ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಒಟ್ಟು 141 ಕೋಟಿ ರೂ. ನಷ್ಟ ಸಂಭವಿಸಿದೆ. 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1232 ಮನೆಗಳು ಹಾನಿಗೊಂಡಿದೆ. ರಾಜ್ಯ ಸರಕಾರ ಈಗಾಗಲೇ 18 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ ಉಳಿದಂತೆ ಇನ್ನಷ್ಟು ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈಗಾಗಲೇ ಅರ್ಜಿ ಸಲ್ಲಿಸಿರುವ ಪಡಿತರ ಚೀಟಿದಾರರಿಗೆ ಪಡಿತರ ಕಾರ್ಡ್ ತ್ವರಿತವಾಗಿ ಕಳುಹಿಸಬೇಕು. ಈಗ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿಗೆ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಉಡುಪಿ ಜಿಲ್ಲೆಯ ಕುಡಿಯುವ ನೀರು ಯೋಜನೆಯ ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಬೇಕು. ಈ ಬಗ್ಗೆ ಪರಿಶೀಲಿಸಿ ಸರಕಾರ ಅನುಮೋದನೆ ನೀಡಲಿದೆ. ವಾರಾಹಿ ನೀರನ್ನು ಉಡುಪಿ ನಗರಕ್ಕೆ ಸರಬರಾಜು ಮಾಡುವ ಸಂಬಂಧ ನಗರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಪರಿಶೀಲಿಸಬೇಕು. ಅಲ್ಲದೇ ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು.
ಉಡುಪಿ ನಗರದಲ್ಲಿ ಮಹಿಳಾ ಹಾಸ್ಟೆಲ್‍ಗಳಿಗೆ ಹೆಚ್ಚು ಬೇಡಿಕೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಜಾಗ ಗುರುತಿಸಬೇಕು. ಅನುದಾನ ಬಿಡುಗಡೆ ಮಾಡಲಾಗುವುದು. ಈಗ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‍ಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಸೀಟು ಲಭ್ಯವಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕ ಹಾಸ್ಟೆಲ್ ಸ್ಥಾಪಿಸಲು ಕುಮಾರಸ್ವಾಮಿ ತಿಳಿಸಿದರು.
ಕೊರಗರಿಗೆ ಮನೆ – ಕೊರಗ ಸಮುದಾಯದವರಿಗೆ ಮನೆ ನಿರ್ಮಿಸಲು ಸರಕಾರ ನೆರವು ನೀಡುತ್ತಿದ್ದರೂ, ಮನೆ ನಿರ್ಮಾಣಕ್ಕೆ ಕಷ್ಟ ಪಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಏಜನ್ಸಿಗಳಿಂದಲೇ ಕೊರಗರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಿಪಿಎಲ್ ಕಾರ್ಡ್ ತೋರಿಸಿದರೂ ಆರೋಗ್ಯ ವಿಮೆ
ರಾಜ್ಯ ಸರಕಾರವು ಎಲ್ಲಾ ಆರೋಗ್ಯ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕಾರ್ಡ್ ಯೋಜನೆ ಜಾರಿಗೆ ತಂದಿದೆ. ಆದರೂ ಈ ಕಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುವಲ್ಲಿ ಕೆಲವು ಗೊಂದಲಗಳುಂಟಾಗಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಡ್ ಇಲ್ಲದಿದ್ದರೆ, ಬಿ.ಪಿ.ಎಲ್. ಕಾರ್ಡ್ ತೋರಿಸಿದರೂ ಚಿಕಿತ್ಸೆ ಕೊಡಲು ರಾಜ್ಯ ಸರಕಾರ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಇದಕ್ಕೆ ಸೂಕ್ತ ಪ್ರಚಾರ ನೀಡಬೇಕು ಎಂದು ತಿಳಿಸಿದರು.