Connect with us

LATEST NEWS

ದಕ್ಷಿಣಕನ್ನಡ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ

ಮಂಗಳೂರು ನವೆಂಬರ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಪುನರಾರಂಭಿಸಲು ಜಿಲ್ಲಾಡಳಿತ ಮತ್ತೆ ಹಸಿರು ನಿಶಾನೆ ತೋರಿದೆ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಏಳು ಸದಸ್ಯರ ಸಮಿತಿಯ ಸಭೆಯಲ್ಲಿ ಸಿಆರ್‌ಜೆಡ್‌ ವಲಯದಲ್ಲೂ ಮರಳುಗಾರಿಕೆ ನಡೆಸಲು ಅನುಮತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.


ಸಿಆರ್‌ಜೆಡ್‌ ವಲಯದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು 14 ಕಡೆ ಸ್ಥಳಗಳನ್ನು ಗುರುತಿಸಿತ್ತು. ಅಲ್ಲಿ ಸಾಂಪ್ರದಾಯಿಕವಾಗಿ ಮರಳುಗಾರಿಕೆಗೆ ಅನುಮತಿ ನೀಡಲು ಜಿಲ್ಲಾಡಳಿತವು ಮೇ ತಿಂಗಳಲ್ಲಿ ಟೆಂಡರ್‌ ಕರೆದಿತ್ತು. ಒಟ್ಟು 287 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 200 ಅರ್ಜಿಗಳನ್ನು ಗುರುತಿಸಲಾಗಿದ್ದು, 148 ಮಂದಿಗೆ ಪರವಾನಗಿಯನ್ನೂ ನೀಡಲಾಗಿತ್ತು. ಸಿಆರ್‌ಜೆಡ್‌ ವಲಯದಲ್ಲಿ ತೆಗೆಯುವ ಮರಳನ್ನು ಮಾರಾಟ ಮಾಡುವಂತಿಲ್ಲ. ನದಿ ದಂಡೆಯ ತಗ್ಗುಪ್ರದೇಶಗಳನ್ನು ಭರ್ತಿ ಮಾಡುವುದಕ್ಕೆ ಹಾಗೂ ಕಿನಾರೆಗಳಲ್ಲಿ ಮರಳು ಪೋಷಣೆಗೆ ಮಾತ್ರ ಆ ಮರಳನ್ನು ಬಳಸಬಹುದು ಎಂದು ಹಸಿರು ನ್ಯಾಯ ಮಂಡಳಿಯ ಚೆನ್ನೈ ಪೀಠವು ಮೇ 18ರಂದು ಆದೇಶ ಮಾಡಿತ್ತು. ಇದರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿರ್ಬಂಧಿಸಿ ಆಗಿನ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದರು.

ಮರಳುಗಾರಿಕೆಗೆ ಜಿಲ್ಲಾಡಳಿತದ ನಿರ್ಬಂಧ ಹೇರಿದ್ದನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ ತೀರ್ಪಿನ ಪ್ರಕಾರ ಸಿಆರ್‌ಜೆಡ್‌ ವ್ಯಾಪ್ತಿಯಲ್ಲೂ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲು ಏಳು ಮಂದಿ ಸದಸ್ಯರ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಈ ಹಿಂದೆ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಲು ಸಮಿತಿಯಲ್ಲಿ ತೀರ್ಮಾನಿಸಿದ್ದೇವೆ. ಸಿಆರ್‌ಜೆಡ್‌ ವಲಯದಲ್ಲಿ ಮರಳುಗಾರಿಕೆಗೆ ಎಲ್ಲೂ ಯಂತ್ರ ಬಳಸುವಂತಿಲ್ಲ. ಪಾರಂಪರಿಕ ಕಾರ್ಮಿಕರಿಗೆ ಮಾತ್ರ ಅವಕಾಶ. ಯಾವುದೇ ಅಕ್ರಮ ನಡೆಸುವಂತಿಲ್ಲ. ಮರಳು ದಿಬ್ಬಗಳ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅಲ್ಲಿನ ಚಟುವಟಿಕೆ ಮೇಲೆ ನಿಗಾ ಇಡುತ್ತೇವೆ. ಆ್ಯಪ್‌ ಮೂಲಕ ಮಾತ್ರ ಮರಳು ಹಂಚಿಕೆಗೆ ಅವಕಾಶ ಕಲ್ಪಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *