LATEST NEWS
ಶಾಸಕ ಭರತ್ ಶೆಟ್ಟಿ ಕೃಪಾಕಟಾಕ್ಷದಿಂದ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ -ಮೊಯ್ದೀನ್ ಬಾವಾ ಆರೋಪ

ಮಂಗಳೂರು ಸೆಪ್ಟೆಂಬರ್ 15:ಶಾಸಕ ಭರತ್ ಶೆಟ್ಟಿ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಜಿ ಶಾಸಕ ಮೊಯಿದ್ದಿನ್ ಬಾವಾ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ, ರಾಜ್ಯದಲ್ಲಿ ಹಾಗೂ ಜಿಲ್ಲಾಡಳಿತವೂ ತಮ್ಮದೇ ಎಂದು ಮಂಗಳೂರು ಉತ್ತರದ ಶಾಸಕರು ಅಧಿಕಾರಿಗಳನ್ನು ಬೆದರಿಸಿ ಎಗ್ಗಿಲ್ಲದೆ ಕಾನೂನನ್ನು ಕೈಗೆ ತೆಗೆದುಕೊಂಡು ಕಾರ್ಯಕರ್ತರಿಂದ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ತಣ್ಣೀರುಬಾವಿ, ಮೀನಕಳಿಯ ಹಾಗೂ ಅದ್ಯಪಾಡಿಗಳಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು?.ಈ ಬಗ್ಗೆ ವಿಚಾರಿಸಿದರೆ, ಮನೆಕಟ್ಟಲು ಮಣ್ಣು ತೆಗೆಯಲಾಗುತ್ತಿದೆ, ಇದಕ್ಕೆ ನಮಗೆ ಪರವಾನಿಗೆ ದೊರೆತಿದೆ ಎಂಬ ಉತ್ತರ ಬರುತ್ತಿದೆ ಎಂದ ಅವರು, ಆದರೆ ಅವರು ಶುದ್ಧ ಸುಳ್ಳು ಹೇಳುತ್ತಿದ್ದು, ಸರ್ಕಾರಿ ಜಮೀನುಗಳಲ್ಲಿ ಮರಳು ತೆಗೆದು ಆ ಪ್ರದೇಶದಲ್ಲಿರುವ ಆರ್ಎಂಸಿ ಪ್ಲ್ಯಾಂಟ್ಗೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಮನೆ ಕಟ್ಟುವುದಿದ್ದಲ್ಲಿ ಅಲ್ಲಿಯೇ ಹಾಕಬೇಕಿತ್ತು. ಅದು ಬಿಟ್ಟು ಪ್ಲ್ಯಾಂಟ್ ಬಳಿ ಯಾಕೆ ಹಾಕಬೇಕಿತ್ತು. ರಾತ್ರಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದರೆ, ಬೆಳಗ್ಗೆ ಹಗಲು ದರೋಡೆ ಮಾಡಲಾಗುತ್ತದೆ. ಮಂಗಳೂರು ಉತ್ತರದ ಶಾಸಕ ಡಾ. ವೈ.ಭರತ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ಇದು ನಡೆಯುತ್ತಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು.