DAKSHINA KANNADA
ಮಂಗಳೂರು ಪೋಲೀಸ್ ಕಮಿಷನರ್ ವರ್ಗಾವಣೆ ಹಿಂದೆ ಅಕ್ರಮ ಮರಳುಗಾರಿಕೆ ಕೈವಾಡ ?
ಮಂಗಳೂರು ಪೋಲೀಸ್ ಕಮಿಷನರ್ ವರ್ಗಾವಣೆ ಹಿಂದೆ ಅಕ್ರಮ ಮರಳುಗಾರಿಕೆ ಕೈವಾಡ ?
ಮಂಗಳೂರು, ಜೂನ್ 9: ಮಂಗಳೂರು ಪೋಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರನ್ನು ರಾಜ್ಯ ಸರಕಾರ ಮೈಸೂರಿನ ಪೋಲೀಸ್ ಅಕಾಡಮಿಯ ನಿರ್ದೇಶಕ ಹಾಗೂ ಐಜಿಪಿಯಾಗಿ ವರ್ಗಾವಣೆ ಮಾಡಿದೆ.
ಎಪ್ರಿಲ್ 18 ರಂದು ಮಂಗಳೂರು ಪೋಲೀಸ್ ಕಮಿಷನರ್ ಆಗಿದ್ದ ಟಿ.ಆರ್.ಸುರೇಶ್ ವರ್ಗಾವಣೆಗೊಂಡ ಸ್ಥಾನಕ್ಕೆ ವಿಪುಲ್ ಕುಮಾರ್ ನಿಯುಕ್ತಿಗೊಂಡಿದ್ದರು.
ವಿಪುಲ್ ಕುಮಾರ್ ಮಂಗಳೂರು ಪೋಲೀಸ್ ಕಮಿಷನರ್ ಆಗಿ ಎರಡು ತಿಂಗಳು ಮಾತ್ರ ಕಳೆದಿದೆ.
ಆದರೆ ಇದೀಗ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮಂಗಳೂರು ಪೋಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಆದೇಶದ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ಕೈವಾಡವಿದೆ ಎನ್ನುವ ಗುಮಾನಿಯಿದೆ.
ಮಂಗಳೂರು ಪೋಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಪುಲ್ ಕುಮಾರ್ ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗಳಿಗೆ ದಾಳಿ ಮಾಡಿ ಅಕ್ರಮಕ್ಕೆ ಕಡಿವಾಣ ಹಾಕಿದ್ದರು.
ಅಲ್ಲದೆ ಈ ಅಕ್ರಮಗಳನ್ನು ತಡೆಯಲು ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನೂ ರಚಿಸಿದ್ದರು.
ವಾರದ ಹಿಂದೆ ಈ ತಂಡ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಲವು ಅಕ್ರಮ ಮರಳು ಅಡ್ಡೆಗಳಿಗೆ ದಾಳಿ ಮಾಡಿ ಸುಮಾರು 1400 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದರು.
ಅಲ್ಲದೆ ಈ ಅಕ್ರಮಕ್ಕೆ ಸಹಕರಿಸಿದ ಬಜಪೆ ಪೋಲೀಸ್ ಠಾಣೆಯ ಮೂವರು ಪೋಲೀಸರನ್ನೂ ಅಮಾನತು ನಡೆಸಿದ್ದರು.
ಈ ನಡುವೆಯೇ ಇದೀಗ ವಿಪುಲ್ ಕುಮಾರ್ ಅವರನ್ನು ತಕ್ಷಣಕ್ಕೆ ಮೈಸೂರಿಗೆ ವರ್ಗಾವಣೆ ನಡೆಸಿದೆ.
ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಅಕ್ರಮ ಮರಳುಗಾರಿಕೆಗೆ ಪೋಲೀಸ್ ಇಲಾಖೆ ಕಡಿವಾಣ ಹಾಕಿದ್ದರು.
ಆದರೆ ಇದೀಗ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿದ್ದ ಪೋಲೀಸ್ ಅಧಿಕಾರಿಯ ವರ್ಗಾವಣೆಯಾಗಿದೆ.
ಜಿಲ್ಲೆಯಲ್ಲಿ ಎಲ್ಲಾ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳ ಅನುಯಾಯಿಗಳು ಈ ಮರಳುದಂಧೆಯಲ್ಲಿ ನಿರತರಾಗಿದ್ದು, ಈ ಕಾರಣಕ್ಕಾಗಿಯೇ ಈ ದಂಧೆಕೋರರ ಒತ್ತಡಕ್ಕೆ ಮಣಿದು ಮಂಗಳೂರು ಪೋಲೀಸ್ ಕಮಿಷನರ್ ವಿಪುಲ್ ಕುಮಾರ್ ವರ್ಗಾವಣೆಯಾಗಿದೆ ಎನ್ನುವ ಗುಸು ಗುಸು ಮಾತುಗಳು ಇದೀಗ ರಾಜಕೀಯ ವಲಯದಿಂದಲೇ ಕೇಳಿ ಬರುತ್ತಿದೆ.