DAKSHINA KANNADA
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಮರಳು ಸಾಗಾಟ ಲಾರಿಗಳು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಮರಳು ಸಾಗಾಟ ಲಾರಿಗಳು
ಮಂಗಳೂರು, ಅಕ್ಟೋಬರ್ 27: ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನತೆಗೆ ಮರಳು ಸಿಗುತ್ತಿಲ್ಲ ಎನ್ನುವ ಕೂಗಿನ ಜೊತೆಗೆ ಕಾಂಗ್ರೇಸ್ ಪಕ್ಷ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದೆ ಎನ್ನುವ ಬಿಜೆಪಿ ಮುಖಂಡರ ಆರೋಪಗಳೂ ಕೇಳಿ ಬರುತ್ತಿದೆ.
ಜಿಲ್ಲೆಯ ಜನತೆಗೆ ಬೇಕಾಗುವಷ್ಟು ಮರಳು ಪೂರೈಕೆಯಾಗುತ್ತಿದೆಯೋ ಇಲ್ಲವೋ ಎನ್ನುವುದು ಎಷ್ಟು ಸತ್ಯವೋ, ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ನಿರಂತರವಾಗಿ ಮರಳು ಪೂರೈಕೆಯಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯವಾಗಿದೆ.

ಅಲ್ಲದೆ ಈ ರೀತಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ಲಾರಿಗಳು ಎಗ್ಗಿಲ್ಲದೆ ಸಾಗಿ ಮಾಡುವ ಅನಾಹುತಗಳೂ ಹೆಚ್ಚಾಗುತ್ತಿದೆ.
ಇಂದು ಮುಂಜಾನೆ ಕೂಡಾ ಇದೇ ರೀತಿ ಲಂಗು-ಲಗಾಮಿಲ್ಲದೆ ಸಾಗಿದ ಮರಳು ಸಾಗಾಟದ ಟಿಪ್ಪರ್ ಲಾರಿಯೊಂದು ಕಲ್ಲಾಪು ಸಮೀಪ ಸರಕಾರಿ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಲ್ಲದೆ ರಸ್ತೆಯಲ್ಲಿ ಹಾಕಿದ್ದ ಬಾರಿಕೇಡ್ ಗಳನ್ನೂ ದ್ವಂಸ ಮಾಡಿದೆ.
ಮರಳು ಸಾಗಾಟ ಲಾರಿ ಚಾಲಕರ ಈ ರೀತಿಯ ಬೇಜಾಬ್ದಾರಿಯುತ ಚಾಲನೆಯಿಂದಾಗಿ ಈಗಾಗಲೇ ಹಲವು ಅಫಘಾತಗಳು ಸಂಭವಿಸಿದೆ.
ಈ ಹಿಂದೆಯೂ ಕಲ್ಲಾಪು ಪರಿಸರದಿಂದ ಮರಳು ತುಂಬಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಲಾರಿಯೊಂದು ಖಾಸಗಿ ವಾಹಿನಿಯೊಂದರ ಬೈಕ್ ಗೆ ಡಿಕ್ಕಿ ಹೊಡೆದಿರುವುದಲ್ಲದೆ, ಕಲ್ಲಾಪು ಬಳಿ ರಾಷ್ಟ್ರೀಯ ಹೆದ್ದಾರಿಗೆ ಹಾಕಿದ್ದ ಬ್ಯಾರೀಕೇಡ್ ಗೆ ಹಾನಿಯನ್ನೂ ಮಾಡಿತ್ತು.
ಮರಳು ಸಾಗಾಟ ಲಾರಿಗಳ ಈ ರೀತಿಯ ಬೇಜಾವಬ್ದಾರಿಯುತ ಚಾಲನೆಯ ಬಗ್ಗೆ ಉಳ್ಳಾಲ ಪೋಲೀಸರ ಗಮನಕ್ಕೆ ತಂದರೂ, ದೂರು ಕೊಡಿ, ಅದು ಕೊಡಿ, ಇದು ಕೊಡಿ ಎಂದು ಹೇಳಿ ಮರಳು ಲಾರಿಗಳನ್ನು ಸಮರ್ಥಿಸುವ ಕಾರ್ಯವನ್ನೂ ಮಾಡಿದ್ದರು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.
ಕಲ್ಲಾಪು ನದಿ ತೀರದಲ್ಲಿ ನಿರಂತರವಾಗಿ ಮರಳು ಸಂಗ್ರಹ ಹಾಗೂ ಇದೇ ಪ್ರದೇಶದಿಂದ ಕೇರಳಕ್ಕೆ ಮರಳು ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ.
ಈ ಪ್ರದೇಶಕ್ಕೆ ಅಪರಿಚಿತ ವ್ಯಕ್ತಿಗಳು ಭೇಟಿ ನೀಡಿದ್ದೇ ಆದಲ್ಲಿ ಆ ವ್ಯಕ್ತಿಯನ್ನು ಪ್ರಶ್ನಿಸುವ ಹಾಗೂ ಬೆದರಿಕೆಯೊಡ್ಡುವ ಪ್ರಕ್ರಿಯೆಗಳೂ ಇಲ್ಲಿ ನಡೆಯುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.
ಇಲ್ಲಿ ನಡೆಯುತ್ತಿರುವ ಮರಳು ಮಾಫಿಯಾದ ವಿರುದ್ಧವಾಗಿ ಮಾತನಾಡಿದವರನ್ನು ಕಲ್ಲು ಕಟ್ಟಿ ನೀರಿಗೆ ಎಸೆಯಲಾಗುವುದು ಎನ್ನುವ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎನ್ನುವ ಆತಂಕಕಾರಿ ವಿಚಾರವೂ ಬೆಳಕಿಗೆ ಬಂದಿದೆ.
ಇಂಥ ವ್ಯಕ್ತಿಗಳು ಹೊಂದಿರುವ ಲಾರಿಗಳ ಚಾಲಕರಿಂದ ಯಾವ ರೀತಿಯ ವರ್ತನೆಗಳನ್ನು ನಿರೀಕ್ಷೆ ಮಾಡಬಹುದು ಎನ್ನುವುದನ್ನು ಜನರೇ ಅರಿತುಕೊಳ್ಳಬೇಕಿದೆ.