DAKSHINA KANNADA
ಸಕಲೇಶಪುರದಲ್ಲಿ ಸಿಕ್ಕಿಬಿದ್ದ ವಾಹನಕಳ್ಳರನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು
ಪುತ್ತೂರು: ಸಕಲೇಶಪುರದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದ ವಾಹನಕಳ್ಳರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಾಸನದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ನಂಬರ್ ಪ್ಲೆಟ್ ಇಲ್ಲದ ವಾಹನವೊಂದನ್ನು ಸಕಲೇಶಪುರದ ಪೊಲೀಸರು ನಿಲ್ಲಿಸಿದ್ದರು. ತಪಾಸಣೆ ಸಂದರ್ಭ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಕಾರಿನ ದಾಖಲೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಾಹನಗಳ ಕಳ್ಳತನಗಳ ಕೃತ್ಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಕಳವು ಮಾಡಿದ ಕಾರುಗಳ ಪೈಕಿ ಪುತ್ತೂರಿನಿಂದ ನಾಲ್ಕು ಕಾರುಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದರು.ಆರೋಪಿಗಳಿಂದ ಕಳವು ಮಾಡಿದ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದು, ಇದೀಗ ಪುತ್ತೂರು ಪೊಲೀಸರು ಬಾಡಿ ವಾರಂಟ್ ಮೂಲಕ 6 ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಶಬ್ಬೀರ್, ಮೋಯ್ದು ಕುನ್ನಿ, ರಫೀಕ್, ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 44 ಲಕ್ಷ ರೂ.ಬೆಲೆ ಬಾಳುವ 20 ವಾಹನಗಳನ್ನು ವಶಪಡಿಸಿಕೊಂಡಿದ್ದರು.ಈ ವಾಹನ ಕಳವಿನ ಪೈಕಿ 4 ವಾಹನ ಪುತ್ತೂರಿನಿಂದ ಕಳವಾದ ವಾಹನಗಳಾಗಿರುವುದರಿಂದ ಮುಂದಿನ ತನಿಖೆಗಾಗಿ ಪುತ್ತೂರು ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.