LATEST NEWS
ಕೋರ್ಟ್ ಆದೇಶ ಹಿಡಿದು ಗಂಡನ ಮನೆ ಬೀಗ ಒಡೆದು ಪ್ರವೇಶಿಸಿ ಕನಕದುರ್ಗಾ
ಕೋರ್ಟ್ ಆದೇಶ ಹಿಡಿದು ಗಂಡನ ಮನೆ ಬೀಗ ಒಡೆದು ಪ್ರವೇಶಿಸಿ ಕನಕದುರ್ಗಾ
ಕೇರಳ ಫೆಬ್ರವರಿ 7: ಶಬರಿ ಮಲೆ ಪ್ರವೇಶಿಸಿ ವಿವಾದಕ್ಕೀಡಾಗಿರುವ ಕನಕದುರ್ಗಾ ಸ್ಥಳೀಯ ನ್ಯಾಯಾಲಯದ ತೀರ್ಪಿನನ್ವಯ ಮಲಪ್ಪುರಂ ಅಂಗಾಡಿಪುರದಲ್ಲಿರುವ ಪತಿ ಮನೆಗೆ ವಾಪಾಸಾಗಿದ್ದಾರೆ.
ಆದರೆ ಆಕೆ ಮನೆಗೆ ಆಗಮಿಸುತ್ತಿದ್ದಂತೆ ಪತಿ ಕೃಷ್ಣನುಣ್ಣಿ ತನ್ನ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಬೇರೆಡೆ ತೆರಳಿದ್ದಾರೆ. ಪೊಲೀಸರು ಮನೆ ಬೀಗ ಒಡೆದು ಕನಕದುರ್ಗಳಿಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಇದಕ್ಕೂ ಮುನ್ನ ಜನವರಿ 2 ರಂದು ಕನಕದುರ್ಗ ಶಬರಿಮಲೆ ಪ್ರವೇಶಿಸಿದ ನಂತರ ಜನವರಿ 5 ರಂದು ಮೊದಲ ಬಾರಿಗೆ ತನ್ನ ಗಂಡನ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಕನಕದುರ್ಗ ಅವರ ಅತ್ತೆ ಅವರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದರು. ಹಲ್ಲೆಗೊಳಗಾದ ಕನಕದುರ್ಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಸರಕಾರದ ಆಶ್ರಯದಲ್ಲಿದ್ದರು.
ಕುಟುಂಬದವರು ಮನೆಯಿಂದ ಹೊರ ಹಾಕಿದ ನಂತರ ಕನಕದುರ್ಗ ಗಂಡನ ಮನೆಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ತೀರ್ಪು ನೀಡಿದ್ದ ಸ್ಥಳೀಯ ನ್ಯಾಯಾಲಯ ಕನಕದುರ್ಗ ಪತಿ ಮನೆಯಲ್ಲಿ ವಾಸಿಸಲು ಪತಿ, ಸಂಬಂಧಿಕರು ಅಡ್ಡಿ ಮಾಡುವಂತಿಲ್ಲ ಎಂದು ಆದೇಶಿಸಿತ್ತು.
ತನ್ನ ಪರ ತೀರ್ಪು ಬಂದ ಹಿನ್ನಲೆಯಲ್ಲಿ ಮಂಗಳವಾರ ಕನಕದುರ್ಗಾ ಪತಿ ಮನೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಆಗಮಿಸಿದ್ದರು. ಆದರೆ ಅದಾಗಲೇ ಪತಿ ಮನೆಯವರು ಮನೆ ಬಿಟ್ಟು ಬೇರೆ ಕಡೆಗೆ ತೆರಳಿದ್ದರು. ನಂತರ ಪೊಲೀಸರು ಬೀಗ ಒಡೆದು ಕನಕದುರ್ಗಾ ಅವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಕನಕದುರ್ಗಾ ಹಾಗೂ ಬಿಂದು ಗೆ ಕೇರಳ ಪೊಲೀಸ್ 24 ಗಂಟೆ ಪೊಲೀಸ್ ರಕ್ಷಣೆ ಒದಗಿಸಿದ್ದು, ಪೊಲೀಸ್ ಬೆಂಗಾವಲಿನೊಂದಿಗೆ ಕೆಲಸಕ್ಕೂ ತೆರಳುತ್ತಿದ್ದಾರೆ.