ಕರಾವಳಿಯಲ್ಲಿ ಲೈಟ್ ಫಿಶಿಂಗ್ ನಿಷೇಧ

ಮಂಗಳೂರು ಫೆಬ್ರವರಿ 7: ಕರ್ನಾಟಕದ ಕರಾವಳಿಯ ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ನಿಷೇಧಿಸಿದ ಕೇಂದ್ರ ಸರಕಾರದ ಆದೇಶವನ್ನು ಪಾಲಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಕೇರಳ, ಕರ್ನಾಟಕ, ಗೋವಾ ಮತ್ತು ಮಹರಾಷ್ಟ್ರದಲ್ಲಿ ದೊಡ್ಡ ದೊಡ್ಡ ಮೀನುಗಾರಿಕಾ ಬೋಟ್ ಗಳಿಗೆ ಎಲ್ ಇಡಿ ಲೈಟ್ ನ್ನು ಬಳಸಿ ಮೀನುಗಾರಿಕೆ ನಡೆಸಲಾಗುತ್ತಿತ್ತು, ಇದರಿಂದಾಗಿ ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಕಾರಣ ಕೇಂದ್ರ ಸರಕಾರ 2017ರಲ್ಲಿ ಲೈಟ್ ಫಿಶಿಂಗ್ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.

ಆದರೆ ಉಡುಪಿಯ ಮಲ್ಪೆ ಬಂದರಿನ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಲೈಟ್ ಫಿಶಿಂಗ್ ಬ್ಯಾನ್ ಮಾಡಿದ ಕೇಂದ್ರ ಸರಕಾರದ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಯಾಂತ್ರಿಕೃತ ದೋಣಿ ಖರೀದಿಸಿ ಬೆಳಕು ಬಳಸಿ ಮೀನುಗಾರಿಕೆ ಮಾಡಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ತೊಂದರೆ ಆಗಿದೆ ಎಂದು ಹೈಕೋರ್ಟ್ ನಲ್ಲಿ ಮೀನುಗಾರರ ಪರ ವಕೀಲರು ವಾದ ಮಂಡಿಸಿದ್ದರು.

ಈ ನಡುವೆ ಪಾರಂಪಾರಿವಾಗಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ಮಧ್ಯಂತರ ಅರ್ಜಿ ಸಲ್ಲಿಸಿ, ಲೈಟ್ ಫಿಶಿಂಗ್ ನಿಷೇಧಿಸುವಂತೆ ಹೈಕೋರ್ಟ್ ಗೆ ಕೋರಿದ್ದರು.

ಈ ಹಿನ್ನಲೆಯಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ವಿಲೇವಾರಿ ಮಾಡಿದ್ದು, ಕೇಂದ್ರ ಸರಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಲೈಟ್ ಫಿಶಿಂಗ್ ನಿಷೇಧಿಸಲಾಗಿದೆ.

Facebook Comments

comments