LATEST NEWS
ಪೊಲೀಸ್ ಸರ್ಪಗಾವಲಿನ ನಡುವೆ ಶಬರಿಮಲೆ
ಪೊಲೀಸ್ ಸರ್ಪಗಾವಲಿನ ನಡುವೆ ಶಬರಿಮಲೆ
ಮಂಗಳೂರು ನವೆಂಬರ್ 5: ತಿಂಗಳ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲವು ಇಂದು ತೆರೆಯಲಿದೆ. ಈ ಹಿನ್ನಲೆಯಲ್ಲಿ ಶಬರಿಮಲೆಯಲ್ಲಿ ಈಗ ಪೊಲೀಸ್ ಸರ್ಪಗಾವಲು ನಿರ್ಮಿಸಲಾಗಿದೆ. ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ಮತ್ತು ಸುತ್ತಲಿನ ಪ್ರದೇಶವನ್ನು ಅಕ್ಷರಶಃ ಪೊಲೀಸ್ ಭದ್ರಕೋಟೆಯಾಗಿ ಪರಿವರ್ತಿಸಲಾಗಿದೆ.
ತಿರುವಾಂಕೂರು ರಾಜಮನೆತನದ ಕೊನೆಯ ರಾಜ ಚಿತ್ತಿರ ತಿರುನಾಳ್ ಬಲರಾಮ ವರ್ಮ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ನಡೆಯಲಿರುವ ‘ಚಿತ್ತಿರ ಆಟ್ಟವಿಶೇಷಂ’ ಅಂಗವಾಗಿ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಮಂಗಳವಾರ ರಾತ್ರಿ 10ಕ್ಕೆ ಮುಚ್ಚಲಾಗುತ್ತದೆ.
ಶಬರಿಮಲೆ ಜಾಗರಣೆ ಸ್ಥಳದಲ್ಲಿ ಹಾಗೂ ಸಮೀಪದ ಸ್ಥಳಗಳಲ್ಲಿ 100 ಮಹಿಳಾ ಪೊಲೀಸ್ ಸೇರಿದಂತೆ 1,500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ 20 ಜನರ ಕಮಾಂಡೋ ತಂಡವನ್ನು ಸನ್ನಿಧಾನಂ, ನಿಲಕಲ್ ಮತ್ತು ಪಂಪಾ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತಾಧಿಗಳನ್ನು ತಪಾಸಣೆ ಮಾಡಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದೇಗುಲದ ಬಳಿ ಭದ್ರತೆ ಒದಗಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪರವಾಣಿಗೆ ಪತ್ರ ಕಡ್ಡಾಯವಾಗಿದೆ. ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.