LATEST NEWS
ಶಬರಿಗಿರಿ ಮೂವ್ ಮೆಂಟ್ ಜನಾಂದೋಲನ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ ಉಡುಪಿ

ಶಬರಿಗಿರಿ ಮೂವ್ ಮೆಂಟ್ ಜನಾಂದೋಲನ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ ಉಡುಪಿ
ಉಡುಪಿ ಅಕ್ಟೋಬರ್ 22: ಸುಪ್ರಿಂಕೋರ್ಟ್ ನ ಆದೇಶದ ನಂತರ ಸಾಮಾಜಿಕ ಹೋರಾಟಗಾರ್ತಿಯರು ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ನಡೆಸಿದ ಹೈ ಡ್ರಾಮಾ ವಿರುದ್ದ ಅಯ್ಯಪ್ಪ ಭಕ್ತರು ಒಂದಾಗಿದ್ದಾರೆ. ದೇಶದಾದ್ಯಂತ ಇರುವ ಅಯ್ಯಪ್ಪ ಭಕ್ತರು ಐದು ರಾಜ್ಯಗಳಲ್ಲಿ ಲಕ್ಷ ಜನ ಸೇರಿಸಿ ತಮ್ಮ ಅಭಿಪ್ರಾಯವನ್ನು ಹೊರ ಹಾಕಲಿದ್ದಾರೆ. ಈ ಮೂಲಕ ದೇಶಾದ್ಯಂತ ಶಬರಿಗಿರಿ ಮೂವ್‍ಮೆಂಟ್ ಶುರುವಾಗಲಿದ್ದು, ಇದು ಉಡುಪಿಯಿಂದಲೇ ಪ್ರಾರಂಭವಾಗಲಿದೆ.
ಶಬರಿಮಲೆಗೆ ಎಲ್ಲಾ ವಯಸ್ಸಿನ ಮಳೆಯರ ಪ್ರವೇಶಕ್ಕೆ ಆದೇಶ ನೀಡಿದ ಸುಪ್ರೀಂಕೋರ್ಟ್ ಆದೇಶದ ವಿರುದ್ದ ದೇಶದಾದ್ಯಂತ ಶಬರಿಗಿರಿ ಮೂವ್ ಮೆಂಟ್ ಆರಂಭವಾಗಲಿದೆ. ಐದು ರಾಜ್ಯಗಳಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಿ ಜನಾಂದೋಲನಾ ಜಾಥಾ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕದ ಜನಾಂದೋಲನಾ ಜಾಥಾ ಮತ್ತು ಸಭೆ ಕೃಷ್ಣನೂರು ಉಡುಪಿಯಲ್ಲಿ ನಡೆಯಲಿದ್ದು, ನವೆಂಬರ್ 1ಕ್ಕೆ ದಿನಾಂಕವನ್ನು ನಿಗದಿ ಪಡಿಸಲಾಗಿದೆ.

ಈ ಶಬರಿಗಿರಿ ಮೂವ್ ಮೆಂಟ್ ಜನಾಂದೋಲನಾ ಜಾಥಾ ಸಂಬಂಧ ಉಡುಪಿಯ ಕೃಷ್ಣಮಠದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಇದರಲ್ಲಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಅಯ್ಯಪ್ಪ ಭಕ್ತರ ಬಳಿ ಅಭಿಪ್ರಾಯ ಪಡೆಯಲಾಗಿದೆ.
ನವೆಂಬರ್ 1ಕ್ಕೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ರೀತಿಯ ಪ್ರತಿಭಟನೆಯಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯದ್ದು, ಜನಾಂದೋಲನ ಮತ್ತು ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆಯೂ ನಿರ್ಧಾರವಾಗಲಿದೆ. ಈ ಜನಾಂದೋಲನ ಜಾಥಾದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ರೀತಿಯ ಜನಾಂದೋಲನ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ನಡೆಯಲಿದೆ ಅಂತ ಅಯ್ಯಪ್ಪ ಸೇವಾ ಸಮಾಜಂ ಸಂಚಾಲಕ ಗಿರೀಶ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಈ ಆಂದೋಲನಕ್ಕೆ ಪಂದಳ ರಾಜಮನೆತನದವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.