LATEST NEWS
ರಷ್ಯಾದಲ್ಲಿ ಆಂತರಿಕ ಯುದ್ಧ – ಪುಟಿನ್ ಮೇಲೆ ತಿರುಗಿ ಬಿದ್ದ ಪರಮಾಪ್ತ….!!

ಮಾಸ್ಕೊ ಜೂನ್ 24 : ಉಕ್ರೇನ್ ಮೇಲೆ ಯುದ್ದದ ನಡುವೆ ಇದೀಗ ರಷ್ಯಾಕ್ಕೆ ಮತ್ತೊಂದು ತಲೆನೋವು ಪ್ರಾರಂಭವಾಗಿದ್ದು. ರಷ್ಯಾ ಸೇನೆ ವಿರುದ್ಧ ತಮ್ಮದೇ ದೇಶದ ಖಾಸಗಿ ಮಿಲಿಟರಿ ಪಡೆ ವ್ಯಾಗ್ನರ್ ಗುಂಪು ಸಮರ ಸಾರಿದ್ದು, ಈಗಾಗಲೇ ವೊರೊನೆಝ್ ನಗರದಲ್ಲಿರುವ ಸೇನಾ ಸೌಕರ್ಯಗಳ ಮೇಲೆ ನಿಯಂತ್ರಣ ಸಾಧಿಸಿದೆ. ದಕ್ಷಿಣ ಮಾಸ್ಕೊದ 500 ಕಿ.ಮೀ. ಪ್ರದೇಶವನ್ನು ವಶದಲ್ಲಿರಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್’ ಶನಿವಾರ ವರದಿ ಮಾಡಿದೆ.
25,000 ಯೋಧರನ್ನೊಳಗೊಂಡ ತಮ್ಮ ಬಲಿಷ್ಠ ಪಡೆಯು ರಷ್ಯಾ ಸೇನಾ ನಾಯಕತ್ವ ಉರುಳಿಸುವ ಸಲುವಾಗಿ ಸಾಯುವುದಕ್ಕೂ ಸಿದ್ಧವಾಗಿದೆ ಎಂದು ‘ವ್ಯಾಗ್ನರ್’ ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಝಿನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ.
‘ನಾವೆಲ್ಲರೂ ಸಾಯುವುದಕ್ಕೂ ಸಿದ್ಧರಿದ್ದೇವೆ. ರಷ್ಯಾ ಜನರಿಗಾಗಿ ಪ್ರಾಣ ಬೇಕಾದರೂ ನೀಡುತ್ತೇವೆ’ ಎಂದು ಯೆವ್ಗೆನಿ ಧ್ವನಿ ಸಂದೇಶ ನೀಡಿದ್ದಾರೆ.

ಖಾಸಗಿ ಮಿಲಿಟರಿ ಪಡೆಯಾಗಿರುವ ‘ವ್ಯಾಗ್ನರ್’ ಗುಂಪು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅತ್ಯಂತ ಆಪ್ತವಾಗಿತ್ತು ಎನ್ನಲಾಗಿದೆ. ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೋಜಿನ್ ಮಾಸ್ಕೋ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಕ್ಸ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರೋಸ್ಟೊವ್‌ನಲ್ಲಿ ಮನೆಗಳಿಂದ ಹೊರಬರಬೇಡಿ ಎಂದು ಜನರಲ್ಲಿ ರಷ್ಯಾ ಅಧಿಕಾರಿಗಳು ಕೇಳಿದ್ದಾರೆ.