LATEST NEWS
ರಷ್ಯಾ: ವಿಮಾನ ಪತನ– ಪುಟಿನ್ ವಿರುದ್ಧ ಬಂಡೆದಿದ್ದ ಯವ್ಗೆನಿ ಪ್ರಿಗೋಷಿನ್ ಸಾವು
ಮಾಸ್ಕೊ, ಆಗಸ್ಟ್ 24: ಕಳೆದ ಜೂನ್‌ನಲ್ಲಿ ರಷ್ಯಾ ಸೇನೆ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವಾಗ್ನರ್ ಗ್ರುಪ್ ಎಂಬ ಖಾಸಗಿ ಸೇನೆ ಮುಖ್ಯಸ್ಥ ಯವ್ಗೆನಿ ಪ್ರಿಗೋಷಿನ್ ಖಾಸಗಿ ವಿಮಾನ ಪತನದಲ್ಲಿ ಮೃತಪಟ್ಟಿರಬಹುದಾಗಿ ವರದಿಯಾಗಿದೆ.
ಬುಧವಾರ ಟ್ವೆರ್ ಎಂಬ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿದೆ. ಇದರಲ್ಲಿ ಪ್ರಿಗೋಷಿನ್, ಪೈಲಟ್‌ಗಳು ಸೇರಿದಂತೆ 10 ಜನ ಇದ್ದರು. ಹತ್ತೂ ಜನ ಮೃತಪಟ್ಟಿರುವುದಾಗಿ ರಷ್ಯಾ ಸರ್ಕಾರದ ಮಾಧ್ಯಮ ಸಂಸ್ಥೆ TASS ವರದಿ ಮಾಡಿದೆ. ಪ್ರಿಗೋಷಿನ್ ಸಾವಿನ ಬಗ್ಗೆ ಖಚಿತತೆ ಇನ್ನಷ್ಟೇ ತಿಳಿಯಬೇಕಿದೆ.
25 ಸಾವಿರಕ್ಕೂ ಹೆಚ್ಚು ಬಲಿಷ್ಠ ಹೋರಾಟಗಾರರನ್ನು ಹೊಂದಿರುವ ಪಡೆಯನ್ನು ಹುಟ್ಟಿಹಾಕಿದ್ದು ಪುಟಿನ್ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ರಷ್ಯಾದ 64 ವರ್ಷದ ಯೆವ್ಗೆನಿ ಪ್ರಿಗೋಷಿನ್. ಸೇನೆ ಹಾಗೂ ಪುಟಿನ್ ವಿರುದ್ಧ ಬಂಡಾಯ ಸಾರಿದ್ದ ಪ್ರಿಗೋಷಿನ್ ಇತ್ತೀಚಿಗೆ ಪುಟಿನ್ ಜೊತೆ ಮುನಿಸು ಮರೆತಿದ್ದ ಎನ್ನಲಾಗಿತ್ತು.
ಆದರೆ, ಪ್ರಿಗೋಷಿನ್ ಅವರು ಈ ವಿಮಾನದಲ್ಲಿದ್ದರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.‘ಮಾಸ್ಕೊದಿಂದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಎಂಬ್ರೇಯರ್ ಲೆಗಸಿ ವಿಮಾನವು ಟಿವೆರ್ ಪ್ರದೇಶದ ಕುಜೆಂಕಿನೋ ಗ್ರಾಮದ ಬಳಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಎಂಟು ಶವಗಳು ಸಿಕ್ಕಿವೆ’ ಎಂದು ತುರ್ತುಸ್ಥಿತಿ ಸಚಿವಾಲಯವು ಹೇಳಿದೆ.
‘ವ್ಯಾಗ್ನರ್’ ದಂಗೆ ಮತ್ತು ಶಮನದ ನಂತರ ಪ್ರಿಗೋಷಿನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಎಲ್ಲಿದ್ದಾರೆ ಎನ್ನುವುದೂ ನಿಗೂಢವಾಗಿತ್ತು. ಆದರೆ, ಸದ್ಯ ಅವರು ಆಫ್ರಿಕಾದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವಂತೆ ಸ್ಪಷ್ಟವಾಗಿ ಕಾಣಿಸುವ ವಿಡಿಯೊ ಸೋಮವಾರ ಪ್ರಸಾರವಾಗಿತ್ತು.
ಯಾರು ಈ ಪ್ರಿಗೋಷಿನ್?: 1961 ರಲ್ಲಿ ಸೋವಿಯತ್ ಯೂನಿಯನ್‌ನ ಲೆನಿನ್‌ಗ್ರಾಡ್ ನಲ್ಲಿ (ಈಗಿನ ಸೇಂಟ್‌ಪೀಟರ್ಸ್‌ಬರ್ಗ್) ಜನಿಸಿದ್ದ ಪ್ರಿಗೋಷಿನ್ ಬಾಲ್ಯದಿಂದಲೂ ತುಂಬಾ ಆಕ್ರಮಣಕಾರಿಯಾಗಿ ಬೆಳೆದವ. ಹುಡುಗನಾಗಿದ್ದಾಗಲೇ ಸ್ಥಳೀಯ ಮಾಫಿಯಾದವರ ಜೊತೆ ಸೇರಿ ಭಾರಿ ಪ್ರಮಾಣದ ಹಣ ದರೋಡೆ ಮಾಡಿದ್ದ. ಈ ಅಪರಾಧಕ್ಕಾಗಿ ಆತನನ್ನು 9 ವರ್ಷ ಬಾಲ ಮಂದಿರದಲ್ಲಿ ಇರಿಸಲಾಗಿತ್ತು.
ಅಲ್ಲಿಂದ ಬಿಡುಗಡೆಯಾಗಿ ಬಂದ ನಂತರ ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಪ್ರಿಗೋಷಿನ್ ಕೆಲವೇ ದಿನಗಳಲ್ಲಿ ಆ ಊರಲ್ಲಿ ಹೋಟೆಲ್ ಉದ್ಯಮಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ. 2004 ರಿಂದ ಮಿಲಿಟರಿ ಸಿಬ್ಬಂದಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ, ಕಚೇರಿಗಳಿಗೆ ಆಹಾರ ಪೂರೈಕೆ ಮಾಡುವ ಕಾಂಟ್ರಾಕ್ಟ್ ಅನ್ನು (ಕೇಟರಿಂಗ್ ಉದ್ಯಮ) ಶುರು ಮಾಡಿದ.
ಅಲ್ಲಿಂದ ಪುಟಿನ್ ಸಾಂಗತ್ಯ ಬೆಳೆಸಿಕೊಂಡು ಪ್ರಿಗೋಷಿನ್ ಕ್ರಮೇಣ ಅವರಿಗೆ ಆಪ್ತ ಆಗುತ್ತಾ ಬಂದಿದ್ದ. 2014 ರಲ್ಲಿ ಪುಟಿನ್ ರನ್ನು ಪುಸಲಾಯಿಸಿ ಪಿಎಂಸಿ ವ್ಯಾಗ್ನರ್ ಗ್ರೂಪ್ ಎಂಬ ಖಾಸಗಿ ಸೇನಾಪಡೆಯನ್ನು ಅಸ್ತಿತ್ವಕ್ಕೆ ತಂದ. ಪ್ರಿಗೋಷಿನ್ನಲ್ಲಿದ್ದ ಆಕ್ರಮಣಕಾರಿ ಗುಣವನ್ನು ಕಂಡಿದ್ದ ಪುಟಿನ್ ಅದಕ್ಕೆ ಬೆಂಬಲ ನೀಡುತ್ತಾ ಬಂದರು.
ಪುಟಿನ್ ಬೆಂಬಲದಿಂದ ಸೇಂಟ್‌ಪೀಟರ್ಸ್‌ಬರ್ಗ್ ಮೇಯರ್ ಆಗಿದ್ದ ಪ್ರಿಗೋಷಿನ್ ಹಣಕಾಸು ದೃಷ್ಟಿಯಿಂದಲೂ ಸಾಕಷ್ಟು ಪ್ರಭಾವಶಾಲಿಯಾಗಿ ಬೆಳೆದ. 2022 ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾದ ದಾಳಿಗೆ ಉಕ್ರೇನ್ ಜಗ್ಗಲಿಲ್ಲ. ಇದರಿಂದ ಬೆದರಿದ ಪುಟಿನ್, ರಷ್ಯಾದಲ್ಲಿದ್ದುಕೊಂಡು ಉಕ್ರೇನ್ ಬೆಂಬಲಿಸುವರನ್ನು ಬಗ್ಗುಬಡಿಯಲು ಹಾಗೂ ಉಕ್ರೇನ್ ಹೋರಾಟದಲ್ಲಿ ಸೇನೆಗೆ ಸಹಾಯ ಮಾಡಲು ಈ ವ್ಯಾಗ್ನರ್ ಗ್ರೂಪ್‌ಗೆ ಹಸಿರು ನಿಶಾನೆ ತೋರಿದರು.
ಈ ನಡುವೆ ರಷ್ಯಾ ಅಧ್ಯಕ್ಷರ ವಿರೋಧಿಗಳನ್ನು, ಸರ್ಕಾರದ ವಿರೋಧಿಗಳನ್ನು ಹಾಗೂ ಅಮೆರಿಕವನ್ನು ಕಟುವಾಗಿ ಟ್ರೋಲ್ ಮಾಡಲು ಇಂಟರ್‌ನೆಟ್ ರಿಸರ್ಚ್ ಏಜನ್ಸಿ (ಐಆರ್‌ಎ) ಎಂಬ ಸಂಸ್ಥೆಯನ್ನು ಪ್ರಿಗೋಷಿನ್ ಸ್ಥಾಪಿಸಿದ್ದ.