LATEST NEWS
RTGS ಸೇವೆ ಇನ್ನು ಮುಂದೆ 24×7

ನವದೆಹಲಿ: ಆರ್ ಟಿಜಿಎಸ್ ಸೇವೆ ಇನ್ನು ಮುಂದೆ ದಿನದ 24 ಗಂಟೆಗಳಲ್ಲೂ ಕಾರ್ಯನಿರ್ವಹಿಸಲಿದ್ದು, ನಿನ್ನೆ ಮಧ್ಯರಾತ್ರಿಯಿಂದ ಆರ್ ಟಿಜಿಎಸ್ ಸೇವೆ ದಿನದ 24×7 ಕಾರ್ಯನಿರ್ವಹಣೆ ಮಾಡಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್‌ಟಿಜಿಎಸ್ ಅನ್ನು ದೊಡ್ಡ ಮೊತ್ತವನ್ನು ತತ್ ಕ್ಷಣ ವರ್ಗಾವಣೆ ಮಾಡಲು ಬಳಸಲಾಗುತ್ತಿದೆ. ಎನ್‌ಇಎಫ್‌ಟಿಯನ್ನು 2 ಲಕ್ಷ ರೂ.ಗಳವರೆಗೆ ಹಣ ವರ್ಗಾವಣೆಗೆ ಬಳಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಎರಡು ವರ್ಷ ಪೂರೈಸಿರುವ ಶಕ್ತಿಕಾಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಡಿಸೆಂಬರ್ 1 ರಿಂದಲೇ ದೇಶದಲ್ಲಿ ಜಾರಿಗೆ ಬರಬೇಕಾಗಿತ್ತು. ಆದರೆ, ವಿಳಂಬವಾದರೂ ಸೋಮವಾರದಿಂದ ಜಾರಿಗೆ ಬರುತ್ತಿದ್ದು ಇಂತಹ ಸೌಲಭ್ಯ ಕಲ್ಪಿಸಿದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಡಿಸೆಂಬರ್ 13ರ ಮಧ್ಯರಾತ್ರಿ ನಂತರ ಆರ್ ಟಿಜಿಎಸ್ ಸೌಲಭ್ಯವಿಸ್ತರಣೆ ಜಾರಿಗೊಳ್ಳಲಿದೆ. ಬ್ಯಾಂಕ್ ಖಾತೆಗಳಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮೇಲಿದ್ದ ಶುಲ್ಕ ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗ್ರಾಹಕರಿಗೆ ಈ ಮೂಲಕ ಮತ್ತೊಂದು ಶುಭ ಸುದ್ದಿ ದೊರಕಿದೆ . ಕಳೆದ ಡಿಸೆಂಬರ್ ತಿಂಗಳಿನಿಂದ ನೆಫ್ಟ್ ಕೂಡಾ ದಿನದ 24 ಗಂಟೆಗಳ ಕಾಲ ಬಳಕೆಗೆ ಲಭ್ಯವಾಗಿದೆ. ಇದಕ್ಕೂ ಮುನ್ನ ನೆಫ್ಟ್ ಕೇವಲ ಬೆಳಗ್ಗೆ 8 ರಿಂದ ರಾತ್ರಿ 7ರ ತನಕ ಮಾತ್ರ ಲಭ್ಯವಿತ್ತು. ಅಲ್ಲದೆ ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಬಳಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಈ ವ್ಯವಸ್ಥೆ ಸಕ್ರಿಯಗೊಳಿಸುವಿಕೆಯೊಂದಿಗೆ ಹಿಂದಿನ ಐದು ದಿನಗಳ ಹಿಂದಿನ ಬದಲಾಗಿ ವಾರದ ಎಲ್ಲಾ ದಿನಗಳಲ್ಲಿ ಎಇಪಿಎಸ್, ಐಎಂಪಿಎಸ್, ಎನ್‌ಇಟಿಸಿ, ಎನ್‌ಎಫ್‌ಎಸ್, ರುಪೇ, ಯುಪಿಐ ವಹಿವಾಟುಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ. ಇದು ಪಾವತಿ ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದೆ.