Connect with us

BANTWAL

RSS ಕಾರ್ಯಕರ್ತ ಶರತ್ ಹತ್ಯೆಗೆ ಒಂದು ತಿಂಗಳು – ಆರೋಪಿ ಪತ್ತೆಗೆ ವಿಫಲರಾದ ಪೊಲೀಸರು.

ಬಂಟ್ವಾಳ,ಅಗಸ್ಟ್ 04 : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ನಡೆದು ಇಂದಿಗೆ ಒಂದು ತಿಂಗಳು ಸಂದಿದೆ. ಆದರೆ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೆ ವಿಫಲವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ಬಳಿ ಇರುವ ಉದಯ ಲಾಂಡ್ರಿಯಲ್ಲಿ ಶರತ್ ಜುಲೈ 4 ರಂದು ರಾತ್ರಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಮಯದಲ್ಲಿ ಬೈಕಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದರು.

ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ಶರತ್ ಹತ್ಯೆಯ ಬಳಿಕ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಶಾಂತಿಯ ವಾತಾವರಣ ನೆಲೆಸಿ, ಗುಂಪು ಘರ್ಷಣೆಗೂ ಕಾರಣವಾಗಿತ್ತು. ಶರತ್ ಹತ್ಯೆ ಪ್ರಕರಣ ಮತ್ತು ಆ ನಂತರ ನಡೆದ ವಿದ್ಯಮಾನಗಳು ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸ್ ಇಲಾಖೆ, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತ್ತು.

ಜಿಲ್ಲೆಯ ನಾಲ್ಕು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ಪ್ರಕರಣ ಭೇಧಿಸುವ ಯತ್ನ ನಡೆಸಿತ್ತು.ನೆರೆಯ ಜಿಲ್ಲೆಗಳಿಗೆ ಹಾಗೂ ನೆರೆರಾಜ್ಯ ಕೇರಳಕ್ಕೂ ಪೋಲಿಸ್ ತಂಡಗಳು ಹೋಗಿ ಬರಿಗೈಯಲ್ಲಿ ವಾಪಸ್ಸು ಬಂದಿವೆ. ಆದರೆ ತಿಂಗಳಾದರೂ ಫಲಿತಾಂಶ ಮಾತ್ರ ಶೂನ್ಯ.ಈ ತಂಡಗಳಿಗೆ ಕೊಲೆಯ ಆರೋಪಿಗಳು ಬಿಡಿ ಅದರ ಸುಳಿವನ್ನು ಪತ್ತೆ ಹಚ್ಚುವಲ್ಲಿ ಕೂಡ ಸಾಧ್ಯವಾಗಿಲ್ಲ.
ನೂತನವಾಗಿ ಅಧಿಕಾರ ವಹಿಸಿದ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪೊಲೀಸರ ತಂಡ ಈವರೆಗೆ ಕೇವಲ ಮೊಬೈಲ್ ಲೋಕೇಷನ್ ಗಳನ್ನಷ್ಟೆ ತನಿಖೆ ಮಾಡಿದೆ. ಹತ್ಯೆ ನಡೆದ ಸಂದರ್ಭದಲ್ಲಿ ಪರಿಸರದಲ್ಲಿದ್ದ ಮೊಬೈಲ್ ಟವರ್ ಗಳಲ್ಲಿ ಬಳಕೆಯಾದ ಪೋನ್ ನಂಬರ್ ಗಳ ಸಿಡಿಆರ್ ತೆಗೆದು ತನಿಖೆ ನಡೆಸುತ್ತಿದೆ.

ತನಿಖೆಯ ಅನುಭವ ಇರುವ ದಕ್ಷ ಅಧಿಕಾರಿಗಳನ್ನು ನೇಮಿಸದೆ ಮತ್ತು ಕೇವಲ ಮೊಬೈಲ್ ನಂಬರ್ ಗಳನ್ನಷ್ಟೆ ತನಿಖೆ ನಡೆಸುತ್ತಿವುದರಿಂದ ತನಿಖೆ ನಿರೀಕ್ಷಿತ ಯಶಸ್ಸು ಕಾಣಲು ಅಸಾಧ್ಯವಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ ಆದರೂ ಜಿಲ್ಲಾ ಅಪರಾಧ ಪತ್ತೆದಳ ಮಾಡಬೇಕಾದ ಕೆಲಸವನ್ನು ಕಮಿಷನರೇಟ್ ವ್ಯಾಪ್ತಿಯ ಸಿಸಿಬಿಗೆ ವಹಿಸಿರುವುದು ಅಚ್ಚರಿ ಮೂಡಿಸುತ್ತಿದೆ. ಇದೇ ಸಿಸಿಬಿ ತಂಡ ಮೊಬೈಲ್ ಸಂಖ್ಯೆಯೊಂದರ ಜಾಡು ಹಿಡಿದು ದೂರದ ಮುಂಬಯಿಯ ತನಕ ಹೋಗಿ ಬರಿಗೈಯಲ್ಲಿ ಹಿಂದಿರುಗಿದೆ.

ಶರತ್ ಹತ್ಯೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಸಿಸಿಟಿವಿಯೊಂದರಲ್ಲಿ 3 ಜನರ ತಂಡ ಬೈಕೊಂದರಲ್ಲಿ ತೆರಳುತ್ತಿರುವ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದೆ ಆದರೂ ಅದು ಅಸ್ಪಷ್ಟವಾಗಿರುವ ಕಾರಣ ದುಷ್ಕರ್ಮಿಗಳ ಪತ್ತೆ ಸಾಧ್ಯವಾಲಿಲ್ಲ. ಪೊಲೀಸ್ ಅಧಿಕಾರಿ ಯೊಬ್ಬರು ಹೇಳುವ ಪ್ರಕಾರ ಶರತ್ ಹತ್ಯೆ ಪ್ರಕರಣ ವನ್ನು ಪೊಲೀಸ್ ಸ್ಟೈಲ್ ನಲ್ಲೇ ತನಿಖೆ ನಡೆಸಿದ್ದರೆ ಈ ವರೆಗೆ ರಿಸಲ್ಟ್ ಸಿಕ್ಕಿ ಆರೋಪಿಗಳು ಕಂಬಿಯ ಹಿಂದೆ ಇರುತ್ತಿದ್ದರು, ಆದರೆ ತನಿಖೆಯ ಪ್ರಗತಿ ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.


ಶರತ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತಂಡ ಈ ವರೆಗೆ 28 ಸಿಸಿಟಿವಿ ಫೂಟೇಜ್ ಗಳನ್ನು ತನಿಖೆಗೆ ಒಳಪಡಿಸಿದೆ. ಆದರೆ ಪೊಲೀಸರಿಗೆ ಯಾವುದೇ ಸುಳಿವು ದೊರೆತಿಲ್ಲ. ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್ ಇಲಾಖೆಯ ತನಿಖೆಯ ಮೇಲೆ ಶರತ್ ತಂದೆ ತನಿಯಪ್ಪ ಅವರಿಗೆ ನಂಬಿಕೆ ಕಳಕೊಂಡಿದ್ದು ಆರಂಭದಿಂದಲೂ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು.

ಆದರೆ ರಾಜ್ಯ ಸರಕಾರ ಇದಕ್ಕೆ ಕಿವಿಕೊಡದೆ ರಾಜ್ಯ ಪೊಲೀಸ್ ಇಲಾಖೆಯ ತನಿಖೆಯನ್ನೇ ಮುಂದುವರೆಸಿದೆ. ಈ ಹಿಂದಿನ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ್ದ ಮಂಗಳೂರು ಪೋಲಿಸರಿಗೆ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಕೊಲೆ ಆರೋಪಿಗಳನ್ನು ತಿಂಗಳು ಕಳೆದರೂ ಬಂಧಿಸಲು ಸಾಧ್ಯವಾಗದಿರುವುದಕ್ಕೆ ರಾಜ್ಯ ಗೃಹ ಇಲಾಖೆ ಹಾಗೂ ಪೋಲಿಸ್ ಇಲಾಖೆ ಉತ್ತರ ನೀಡಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *