KARNATAKA
ಗೋಮಾಂಸ ರಫ್ತುಉದ್ಯಮದಿಂದ ಮುಸ್ಲಿಂರನ್ನು ಹೊರಗಿಡಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಾಡಿದೆ: ಅಗ್ನಿ ಶ್ರೀಧರ್
ಬೆಂಗಳೂರು, ಜೂನ್ 08: ‘ಜೈನ ಸಮುದಾಯದ ಕೆಲವರು ಗೋವಿನ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ವಾರ್ಷಿಕ ₹40 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದಾರೆ’ ಎಂದು ರಾಷ್ಟ್ರೀಯ ದ್ರಾವಿಡ ಸಂಘದ (ಆರ್‌ಡಿಎಸ್) ಅಧ್ಯಕ್ಷ ಅಗ್ನಿ ಶ್ರೀಧರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಗೋವಿನ ಮಾಂಸ ರಫ್ತು ಮಾಡುವ ಉದ್ಯಮದಲ್ಲಿ ಈ ಹಿಂದೆ ಮುಸ್ಲಿಂ ಸಮುದಾಯವು ದೊಡ್ಡ ಪಾಲನ್ನು ಹೊಂದಿತ್ತು. ಮುಸ್ಲಿಮರನ್ನು ಈ ಉದ್ಯಮದಿಂದ ಹೊರಗಿಡಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ’ ಎಂದು ದೂರಿದರು.
‘ಶ್ರೀಮಂತ ಮುಸ್ಲಿಮರು ಹಸುವಿನ ಮಾಂಸವನ್ನು ತಿನ್ನುವುದಿಲ್ಲ. ಆದರೆ, ಗೋಹತ್ಯೆಯ ವಿಷಯ ಮುನ್ನಲೆಗೆ ಬಂದಾಗಲೆಲ್ಲ ಇದನ್ನು ಮುಸ್ಲಿಮರ ಆಹಾರವೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ದಲಿತರು, ಕ್ರಿಶ್ಚಿಯನ್ನರು ಹಸುವಿನ ಮಾಂಸವನ್ನು ಹೆಚ್ಚು ಸೇವಿಸುತ್ತಾರೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಸುವ ಕೆಲಸ ನಡೆಯುತ್ತಿದೆ’ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಮೂಲಕ ರಾಜ್ಯದ ಕೃಷಿ ಕುಟುಂಬಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ರೈತರ ಜೀವನ ಮೂರಾಬಟ್ಟೆಯಾಗಿದೆ. ವಯಸ್ಸಾದ ಹಸುಗಳನ್ನು ನೋಡಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತಿದೆ. ಆದ್ದರಿಂದ, ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು. ಅರೆಶಂಕರ ಮಠದ ಪೀಠಾಧ್ಯಕ್ಷ ಚೈತನ್ಯ ಸಿದ್ಧರಾಮ ಸ್ವಾಮೀಜಿ, ರೈತ ಸಂಘದ ಚಾಮರಸ ಮಾಲೀಪಾಟೀಲ, ಮನೋವಿಜ್ಞಾನಿ ಡಾ. ಅ. ಶ್ರೀಧರ್ ಇದ್ದರು.