Connect with us

    BANTWAL

    RSS ಕಾರ್ಯಕರ್ತ ಶರತ್ ಹತ್ಯೆ ಪ್ರಕರಣ, ಅಮಾಯಕರಿಗೆ ಕಿರುಕುಳ ನೀಡುತ್ತಿರುವ ಪೊಲೀಸರು :ಎಸ್‌ಡಿಪಿಐ ಆರೋಪ

    ಮಂಗಳೂರು, ಆ. 13 : ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಮಾಯಕ ಯುವಕರನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಎಸ್‌ಡಿಪಿಐ ಅರೋಪಿಸಿದೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಮ್.ಅಥಾವುಲ್ಲಾ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 50ಕ್ಕೂ ಅಧಿಕ ಅಮಾಯಕ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದು ಅದರಲ್ಲಿ ಕೆಲವರಿಗೆ ಮಾನಸಿಕ ಮತ್ತು ದೈಹಿಕವಾಗಿ ದೌರ್ಜನ್ಯ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಮತ್ತೆ ಕೆಲವರನ್ನು ಮನೆಯವರಿಗೂ ಮಾಹಿತಿ ನೀಡದೆ ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದರು.
    ಸಜಿಪಮುನ್ನೂರು ಗ್ರಾಮದ ಶಾಫಿ, ಮುಹಮ್ಮದ್ ಸಹದ್, ಪಿಕಪ್ ಚಾಲಕ ಅಬ್ದುಲ್ ನಾಸಿರ್ ಎಂಬವರನ್ನು ಆ.9ರಂದು ಮಂಡ್ಯ ಜಿಲ್ಲೆಯ ಕದಬಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದ ಇವರು, ಆ.9ರಂದು ಕದಬಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈವರೆಗೂ ಅವರ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿ ಪೊಲೀಸರು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದರು.
    ಶರತ್ ಹತ್ಯೆ ಪ್ರಕರಣದ ತನಿಖೆಗಾಗಿ ಈಗಾಗಲೇ ಆರು ವಿಶೇಷ ಪೊಲೀಸ್ ತನಿಖಾ ತಂಡಗಳನ್ನು ರಚಿಸಲಾಗಿದೆ. ತನಿಖೆಯ ವಿಚಾರದಲ್ಲಿ ಈ ಆರು ತಂಡಗಳೊಳಗೆ ಪರಸ್ಪರ ಪೈಪೋಟಿ ನಡೆಯುತ್ತಿದ್ದು, ಇದಕ್ಕೆ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ಪೊಲೀಸರು ಕಾನೂನನ್ನು ಗಾಳಿಗೆ ತೂರಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗ ಮಾಡುತ್ತಿರುವುದು ಖಂಡನೀಯ. ಪೊಲೀಸರ ಈ ನೀತಿಯ ವಿರುದ್ಧ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿರುವ ಅವರು, ಅಕ್ರಮ ಬಂಧನದಲ್ಲಿರುವ ಅಮಾಯಕ ಯುವಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅಕ್ರಮ ಬಂಧನದಲ್ಲಿರಿಸಿದ ಪೊಲೀಸರು ವಿರುದ್ಧ ಸರಕಾರ, ಜಿಲ್ಲಾಡಳಿತ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *