KARNATAKA
ಕಾರ್ಕಳ ಗೋಮಟೇಶ್ವರ ಬೆಟ್ಟ ರಸ್ತೆಯಲ್ಲಿ ಕಸ ಎಸೆದ ವಿದ್ಯಾರ್ಥಿಗಳಿಗೆ ರೂ.10 ಸಾವಿರ ದಂಡ…!!
ಕಾರ್ಕಳ : ಕಾರ್ಕಳ ಗೋಮಟೇಶ್ವರ ಬೆಟ್ಟದ ರಸ್ತೆ ಬದಿಯಲ್ಲಿ ಕಸ ಎಸೆದ ಪ್ರವಾಸಿ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ. ಪ್ರವಾಸ ಬಂದ ವಿದ್ಯಾರ್ಥಿಗಳು ಕಸ ಬಿಸಾಡಿರುವ ಕುರಿತು ಸ್ಥಳೀಯರೋರ್ವರು ಕಾರ್ಕಳ ಪುರಸಭೆಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಎಚ್ಚೆತ್ತ ಪುರಸಭೆ ಸಂಬಂಧಪಟ್ಟ ಶಾಲೆಗೆ ದಂಡ ವಿಧಿಸಿದೆ.ಈ ಮೂಲಕ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಕಾರ್ಕಳ ಪುರಸಭೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೂರು ಬಸ್‌ಗಳಲ್ಲಿ ಕೊಪ್ಪಳ ಜಿಲ್ಲೆಯಿಂದ ಶೈಕ್ಷಣಿಕ ಪ್ರವಾಸ ಬಂದಿದ್ದ ವಿದ್ಯಾರ್ಥಿಗಳು ಗೋಮಟೇಶ್ವರ ಬೆಟ್ಟದ ಮೆಟ್ಟಿಲು ಮತ್ತು ರಸ್ತೆಯಲ್ಲಿ ಕಸ ಎಸೆದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಶಿಕ್ಷಣ ಸಂಸ್ಥೆಯ ಹೆಸರು ಮತ್ತು ಬಸ್ ನಂಬರ್ ನೋಟ್ ಮಾಡಿಕೊಂಡು ಪುರಸಭೆಯ ಪರಿಸರ ಅಧಿಕಾರಿಗೆ ಮಾಹಿತಿ ನೀಡಿರುತ್ತಾರೆ. ಕೂಡಲೇ ಸ್ಪಂದಿಸಿದ ಅವರು ಸ್ಥಳಕ್ಕೆ ಆಗಮಿಸಿದರು. ಮಾತ್ರವಲ್ಲದೇ ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವೇಳೆ ಶಾಲಾ ಬಸ್ ಸ್ಥಳದಿಂದ ತೆರಳಿತ್ತಾದರೂ ವಿಳಾಸ ಪಡೆದ ಪರಿಸರ ಅಧಿಕಾರಿಯವರು ಶಾಲೆಗೆ 10 ಸಾವಿರ ರೂ. ದಂಡ ವಿಧಿಸಿ ನೋಟಿಸ್ ಅನ್ನು ಅಂಚೆ ಮಾಡಿರುತ್ತಾರೆ.