Connect with us

    DAKSHINA KANNADA

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ರೌಡಿ ಕಾಳಗ : ಗೂಂಡಾ ಕಾಯ್ದೆ ಹೇರಲು ಪೊಲೀಸ್ ಇಲಾಖೆ ಸಿದ್ಧತೆ

    ಮಂಗಳೂರು, ಅಕ್ಟೋಬರ್  27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಗೂಂಡಾಗಳ ಚಲನವಲನಗಳು ಹೆಚ್ಚಾಗಲಾರಂಭಿಸಿದೆ. ವಾರಕ್ಕೊಂದರಂತೆ ಜಿಲ್ಲೆಯಲ್ಲಿ ಇದೀಗ ರೌಡಿ ಕಾಳಗದಿಂದಾಗಿ ಹೆಣಗಳು ಉರುಳಲಾರಂಭಿಸಿದೆ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ರೌಡಿ ಕಾಳಗವನ್ನು ಮಟ್ಟ ಹಾಕಲು ಇದೀಗ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ ರೌಡಿ ಶೀಟರ್ ಗಳ ಮೇಲೆ ನಿಗಾ ಇರಿಸಲು ಪೋಲೀಸ್ ಇಲಾಖೆ ಸಜ್ಜಾಗಿದ್ದು, ಇಂಥ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲು ಎಲ್ಲಾ ಸಿದ್ಧತೆಗಳು ಆರಂಭಗೊಂಡಿದೆ.

    ದಕ್ಷಿಣಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳಲ್ಲಿ ಇದೀಗ ಮತ್ತೆ ರೌಡಿ ಕಾಳಗ ಆರಂಭಗೊಂಡಿದೆ. ಈ ಜಿಲ್ಲೆಗಳಲ್ಲಿ ನಡೆಯುವ ಎಲ್ಲಾ ಅಪರಾಧ ಕೃತ್ಯಗಳಲ್ಲಿ ಉಭಯ ಜಿಲ್ಲೆಗಳ ರೌಡಿಗಳ ಪಾತ್ರ ಹೆಚ್ಚಾಗುತ್ತಿವೆ. ಎರಡು ವಾರದ ಹಿಂದೆ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆ ಹತ್ಯೆಯ ಬಳಿಕ ಈ ಕೊಲೆಗೆ ಪ್ರತೀಕಾರವಾಗಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ಹತ್ಯೆಯಾಗಿದೆ. ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ ನನ್ನು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲಾಗಿದೆ. ಈ ನಡುವೆ ಗಾಂಜಾ ಹಾಗೂ ಇತರ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎರಡು ಗುಂಪುಗಳ ನಡುವೆ ವೈಷ್ಯಮ್ಯ ರೌಡಿಶೀಟರ್ ಓರ್ವನ ಕೊಲೆಯಲ್ಲಿ ಆರಂಭಗೊಂಡಿದೆ. ಕಲ್ಲಡ್ಕ ಹಾಗೂ ಇತರ ಭಾಗಗಳಲ್ಲಿ ಕೊಲೆಯತ್ನ, ದರೋಡೆ ಮೊದಲಾದ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಚೆನ್ನೆ ಫಾರೂಕ್ ಎಂಬ ರೌಡಿಶೀಟರ್ ನನ್ನು ಆತನ ಜೊತೆಗೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಇಬ್ರಾಹಿಂ ಖಲೀಲ್ ಎಂಬಾತನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಪ್ರತೀಕಾರವಾಗಿ ಜಿಲ್ಲೆಯಲ್ಲಿ ಮತ್ತೆ ಹಲವು ಹತ್ಯೆಗಳು ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರಲಾಂಭಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ರೌಡಿಗಳನ್ನು ಮಟ್ಟ ಹಾಕಲು ಮತ್ತೆ ಸಜ್ಜಾಗಿದೆ. ಜಿಲ್ಲೆಯಲ್ಲಿ ರೌಡಿಶೀಟರ್ ಗಳ ಮೇಲೆ ನಿಗಾಯಿಡುವ ಕೆಲಸವನ್ನು ಪೋಲೀಸ್ ಇಲಾಖೆ ಆರಂಭಿಸಿದ್ದು, ಯಾವುದೇ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪುಡಿ ರೌಡಿಗಳ ಪಟ್ಟಿಯನ್ನು ಈಗಾಗಲೇ ಪೋಲೀಸ್ ಇಲಾಖೆ ಸಿದ್ಧಪಡಿಸಿದೆ. ಸುಮಾರು ನೂರಕ್ಕೂ ಮಿಕ್ಕಿದ ರೌಡಿಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೋಲೀಸ್ ಇಲಾಖೆ ಈ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವರದಿಯನ್ನು ಸರಕಾರಕ್ಕೆ ಶೀಘ್ರವೇ ಮಂಡಿಸಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ B.M ಲಕ್ಷ್ಮೀಪ್ರಸಾದ್ ಎಚ್ಚರಿಸಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯು ಕೇರಳದ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ರಾಜ್ಯದ ನಟೋರಿಯಸ್ ಕ್ರಿಮಿನಲ್ ಗಳೂ ಜಿಲ್ಲೆಯನ್ನು ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳೂ ಸಾಕಷ್ಟು ಪತ್ತೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಕೇರಳದ ನಂಟೂ ಇರುವ ಕಾರಣ ಕೇರಳ ಗಡಿಭಾಗದಲ್ಲೂ ಕಟ್ಟುನಿಟ್ಟಿನ ನಿಗಾವಹಿಸಲು ಜಿಲ್ಲಾ ಪೋಲೀಸ್ ತೀರ್ಮಾನಿಸಿದೆ. ದಕ್ಷಿಣಕನ್ನಡ ಹಾಗೂ ಕೇರಳವನ್ನು ಸಂಪರ್ಕಿಸುವ ಸುಮಾರು 17 ರಸ್ತೆಗಳಿದ್ದು, ಈ ರಸ್ತೆಗಳನ್ನೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳ ಬಳಸುತ್ತಿರುವುದೂ ಪೋಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಕೇರಳದಲ್ಲಿ ಅಪರಾಧ ನಡೆಸಿ ಜಿಲ್ಲೆಯಲ್ಲಿ ತಲೆಮರೆಸಿಕೊಳ್ಳುವುದು ಹಾಗೂ ಜಿಲ್ಲೆಯಲ್ಲಿ ಅಪರಾಧ ಕೃತ್ಯ ಎಸಗಿ ಕೇರಳದಲ್ಲಿ ತಲೆಮರೆಸಿಕೊಳ್ಳುವುದೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲೂ ಪೋಲೀಸ್ ಇಲಾಖೆ ಗಡಿ ಭಾಗದಲ್ಲಿ ತಪಾಸಣೆಯನ್ನು ಹೆಚ್ಚಿಸಲೂ ನಿರ್ಧರಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *