Connect with us

    National

    ಭಾರತದ ಶ್ರೀಮಂತ ಮಹಿಳೆ ಈಗ ಎಚ್ ಸಿಎಲ್ ಕಂಪೆನಿ ಅಧ್ಯಕ್ಷೆ

    ಮುಂಬೈ: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್ ಸಿಎಲ್ ಟೆಕ್ನಾಲಜಿಯ ಚೇರ್ಮನ್ ಆಗಿ ಶಿವ್‌ ನಾಡಾರ್‌ ಅವರ ಮಗಳು ರೋಶನಿ ನಾಡಾರ್ ಮಲ್ಹೋತ್ರಾ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಲ್ಪಟ್ಟಿರುವ ರೋಶನಿ ನಾಡಾರ್ ಮಲ್ಹೋತ್ರಾ ಅವರ ಸಂಪತ್ತಿನ ಒಟ್ಟು ಮೌಲ್ಯ ₹ 36,800 ಕೋಟಿ. ರೋಶನಿ ಅವರು ಈಗ ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ.

    ಎಚ್ ಸಿಎಲ್ ಎಂಬ ಐಟಿ ದೈತ್ಯ ಕಂಪೆನಿಯ ಸಹಸಂಸ್ಥಾಪಕರಾಗಿರುವ ಶಿವ ನಾಡಾರ್ ಕಂಪೆನಿಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪುತ್ರಿಯ ಕೈಗೆ ವರ್ಗಾಯಿಸಿದ್ದಾರೆ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಭಾರತದ ಐ.ಟಿ. ಕಂಪನಿಯೊಂದರ ಅಧ್ಯಕ್ಷ ಸ್ಥಾನವನ್ನು ಮಹಿಳೆ ಅಲಂಕರಿಸಿರುವುದು ಇದೇ ಮೊದಲು. ಶಿವ ನಾಡಾರ್  ಅವರ ಒಬ್ಬಳೇ ಮಗಳಾಗಿರುವ  ರೋಶನಿ ಎಚ್ ಸಿಎಲ್ ಕಂಪನಿಯ ಉಪಾಧ್ಯಕ್ಷೆಯಾಗಿ 2013ರಿಂದಲೇ ಕೆಲಸ ಆರಂಭಿಸಿದ್ದರು.

    ರೋಶನಿ ಅವರು ವಿದ್ಯಾಭ್ಯಾಸ ಮಾಡಿದ್ದು ದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ. ಅಮೆರಿಕದ ಇಲಿನಾಯ್ಸ್‌ನ ವಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದಿಂದ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಾಗೆಯೇ, ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಅವರು 2009ರಲ್ಲಿ ಎಚ್‌ಸಿಎಲ್‌ ಕಾರ್ಪೊರೇಷನ್‌ ಸೇರುವ ಮೊದಲು, ಬ್ರಿಟನ್ನಿನ ಸ್ಕೈ ನ್ಯೂಸ್‌ ಹಾಗೂ ಅಮೆರಿಕದ ಸಿಎನ್‌ಎನ್‌ ವಾಹಿನಿಗಳಲ್ಲಿ ಸುದ್ದಿ ನಿರ್ಮಾಪಕಿ ಆಗಿ ಕೆಲಸ ಮಾಡಿದ್ದರು. ಎಚ್‌ಸಿಎಲ್‌ ಕಾರ್ಪೊರೇಷನ್‌ ಸೇರಿದ ಒಂದು ವರ್ಷದೊಳಗೆ ಅದರ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಅದರ ಸಿಇಒ ಕೂಡ ಆಗಿ ಕಾರ್ಯನಿರ್ವಹಿಸಿದ್ದಾರೆ. ರೋಶನಿ ನಾಡಾರ್ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿಯನ್ನು ಪಡೆದಿದ್ದಾರೆ.


    ರೋಶನಿ ನಾಡಾರ್  ಶಿಖರ್ ಮಲ್ಹೋತ್ರಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಅರ್ಮಾನ್‌ ಮತ್ತು ಜಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಶಿಖರ್ ಅವರು ಎಚ್‌ಸಿಎಲ್‌ ಕಾರ್ಪೊರೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


    ಕಂಪೆನಿ ಅಧ್ಯಕ್ಷ ಪಟ್ಟವನ್ನು ಮಗಳಿಗೆ ನೀಡಿದ್ದರೂ ಶಿವ್ ನಾಡಾರ್ ಕಂಪನಿಯಿಂದ ಪೂರ್ಣವಾಗಿ ಹೊರಬಂದಿಲ್ಲ. ಇನ್ನು ಮುಂದೆ ಚೀಫ್ ಸ್ಟ್ರಾಟಜಿ ಆಫೀಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಶಿವ್ ನಾಡಾರ್ ಮುಂದುವರಿಯಲಿದ್ದಾರೆ ಎಂದು ಕಂಪನಿ ಹೇಳಿದೆ.

    Share Information
    Advertisement
    Click to comment

    You must be logged in to post a comment Login

    Leave a Reply