LATEST NEWS
ರೂಪಾ ನಾನು ನಗ್ನ ಚಿತ್ರಗಳನ್ನು ಕಳುಹಿಸಿದ್ದೇನೆ ಎಂದಿದ್ದಾರೆ – ಜನ ನನ್ನನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ – ರೋಹಿಣಿ ಸಿಂಧೂರಿ
ನವದೆಹಲಿ ಜನವರಿ 13: ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ನಡೆಯುತ್ತಿರುವ ಕಾನೂನು ಹೋರಾಟ ಮುಂದುವರೆದಿದ್ದು, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂಬ ನ್ಯಾಯಾಧೀಶರ ಮಾತನ್ನು ಇಬ್ಬರೂ ಕೇಳಲು ತಯಾರಿಲ್ಲ. ಈ ನಡುವೆ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ನಾನು ಅಶ್ಲೀಲ ಮತ್ತು ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಜನರು ನನ್ನನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ” ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ನಲ್ಲಿ ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರ ಪ್ರಕರಣದ ಕುರಿತಂತೆ ವರದಿ ಮಾಡಿರುವ ಬಾರ್ ಆ್ಯಂಡ್ ಬೆಂಚ್ ವೆಬ್ ಸೈಟ್ ಮಾಹಿತಿ ಪ್ರಕಾರ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಇಬ್ಬರ ಪರ ವಕೀಲರು ವಾದಗಳನ್ನು ಮಾಡಿದ್ದು, ಆರೋಪದ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ. ಈ ನಡುವೆ ನ್ಯಾಯಾಧೀಶರು “ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ಆಕ್ಷೇಪಾರ್ಹವಾದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯಲಾಗಿದೆಯೇ? ಈ ವಿಚಾರಕ್ಕೆ ನಾವು ಹೇಗೆ ವಿರಾಮ ಇಡಬೇಕು? ಇಬ್ಬರೂ ಅಧಿಕಾರಿಗಳು ಜವಾಬ್ದಾರಿ ಪ್ರದರ್ಶಿಸಬೇಕು” ಎಂದಿತು.
ಆಗ ಸಿಂಧೂರಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು “ಪೋಸ್ಟ್‌ಗಳು ಮತ್ತು ಪ್ರಕರಣಕ್ಕೆ ಅಂತ್ಯ ಹಾಡಬಹುದು. ಆದರೆ, ಕ್ಷಮೆ ಕೋರಲೇಬೇಕು” ಎಂದರು. ಇದಕ್ಕೆ ಪೀಠವು “ಸೇವೆಯಲ್ಲಿ ಅವರುಗಳ ಉಜ್ವಲ ಭವಿಷ್ಯವನ್ನು ಪರಿಗಣಿಸಿ” ಎಂದಿತು. ಈ ನಡುವೆ ರೂಪಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ನನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಜರಿಯಲಾಗಿದೆ” ಎಂದರು. ಆಗ ಪೀಠವು ಉಭಯ ಪಕ್ಷಕಾರರೂ ವಿಷಾದ ವ್ಯಕ್ತಪಡಿಸಬೇಕು ಎಂದಿತು.
ಇದಕ್ಕೆ ನ್ಯಾ. ಓಕಾ ಅವರು ಉಭಯ ಪಕ್ಷಕಾರರ ವಕೀಲರನ್ನು ಕುರಿತು “ನೀವಿಬ್ಬರೂ ಮುಂದಡಿ ಇಡಬೇಕು. ಇಂಥ ಪ್ರಕರಣಗಳಲ್ಲಿ ಪಕ್ಷಕಾರರು ಕಾರಣಗಳನ್ನು ಗಮನಿಸುವುದಿಲ್ಲ. ಹಲವು ಸಂದರ್ಭದಲ್ಲಿ ನಾವು ಇದನ್ನು ಸುದೀರ್ಘವಾಗಿ ಆಲಿಸಿದ್ದೇವೆ” ಎಂದರು.
ಆಗ ಪೀಠವು ಉಭಯ ಪಕ್ಷಕಾರರಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗುವುದು ಎಂದಿತು. ಈ ಸಂದರ್ಭದಲ್ಲಿ ವಾದಕ್ಕೆ ಮುಂದಾದ ರೋಹಿಣಿ ಸಿಂಧೂರಿ ಅವರು “ಈ ರೀತಿ ನನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡಿರುವುದರಿಂದ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವುದು ನನಗೆ ಕಷ್ಟವಾಗಲಿದೆ” ಎಂದರು. ಆಗ ಪೀಠವು “ಇದು ಒಂದು ಕಡೆಯಿಂದ ಆಗಿಲ್ಲ” ಎಂದಿತು.
ಆಗ ಸಿಂಧೂರಿ ಅವರು “ಇಲ್ಲ. ಇದು ಏಕಮುಖವಾಗಿಯೇ ಆಗಿರುವಂಥದ್ದು. ಮಾಧ್ಯಮಗಳು ನನ್ನ ಬಾಗಿಲ ಹೊರಗಿರುವಾಗ ಆಕೆ (ರೂಪಾ) ನಾನು ನಗ್ನ ಚಿತ್ರಗಳನ್ನು ಕಳುಹಿಸಿದ್ದೇನೆ ಎಂದಿದ್ದಾರೆ. ನಾನು ಸಲಹೆ ನೀಡಿದಂತೆ ಕಾನೂನು ಕ್ರಮಕೈಗೊಳ್ಳುವೆ. ಆದರೆ, ಈ ರೀತಿ ಯಾರು ನಡೆದುಕೊಳ್ಳುತ್ತಾರೆ” ಎಂದು ಆಕ್ಷೇಪಿಸಿದರು. ಈ ವೇಳೆ ಪೀಠವು “ಉಭಯ ಅಧಿಕಾರಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ನಾವು ಇದಕ್ಕೆ ಇತಿಶ್ರೀ ಹಾಡಲು ಬಯಸಿದ್ದೆವು. ಭಾವನೆಗಳು ಉಕ್ಕೇರಿದಾಗ ನಾವೇನೂ ಮಾಡಲಾಗದು… ನಾವು ಹೇಗೆ ಮುಂದುವರಿಯಬೇಕು?” ಎಂದಿತು.
ಸಿಂಧೂರಿ ಅವರು “ನಮಗೆ ಉಜ್ವಲ ಭವಿಷ್ಯ ಇರಬಹುದು. ಜನರು ನನ್ನನ್ನು ಒಂದು ರೀತಿಯಲ್ಲಿ ನೋಡುತ್ತಾರೆ. ಹೀಗಾಗಿ, ನಾನು ಮೌನವಾಗಿರಲು ಸಾಧ್ಯವಿಲ್ಲ” ಎಂದರು. ಆಗ ಪೀಠವು “ನಾವು ನಿಮ್ಮನ್ನು ಮೌನವಾಗಿರಿ ಅಥವಾ ಅರ್ಜಿ ಹಿಂಪಡೆಯಿರಿ ಎಂದು ಹೇಳುತ್ತಿಲ್ಲ” ಎಂದಿತು. ಈ ಹಂತದಲ್ಲಿ ಲೂಥ್ರಾ ಅವರು ತಮ್ಮ ಕಕ್ಷಿದರೆಯಾದ ಸಿಂಧೂರಿ ಅವರ ಕಿವಿಯಲ್ಲಿ ವಾಗ್ವಾದ ಮಾಡಬೇಡಿ ಎಂದರು. ಅಂತಿಮವಾಗಿ ಪೀಠವು ಮಧ್ಯಂತರ ಆದೇಶ ಮುಂದುವರಿಯಲಿದೆ, ಸಭೆ ನಡೆಸಿ ಎಂದು ಹೇಳಿ, ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.