KARNATAKA
ಐಪಿಎಸ್ ಅಧಿಕಾರಿ ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ – ರೋಹಿಣಿ ಸಿಂಧೂರಿ
ಬೆಂಗಳೂರು ಫೆಬ್ರವರಿ 19: ಐಎಎಸ್ ಅಧಿಕಾರಿ ರೋಹಣಿ ಸಿಂಧೂರಿ ಅವರ ಖಾಸಗಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡಗಡೆ ಮಾಡಿದ ಐಪಿಎಸ್ ಅಧಿಕಾರಿ ರೂಪಾ ಡಿ ಅವರ ವಿರುದ್ದ ಇದೀಗ ರೋಹಿಣಿ ಸಿಂಧೂರಿ ಕಿಡಿಕಾರಿದ್ದು, ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ನಡೆಯಿತ್ತಿರುವ ಇಬ್ಬರು ಮಹಿಳಾ ಅಧಿಕಾರಿಗಳ ಗಲಾಟೆ ಯಾವ ಮಟ್ಟಕ್ಕೆ ತಲುಪುತ್ತದೆ ಎನ್ನುವುದ ಸದ್ಯ ಪ್ರಶ್ನೆಯಾಗಿ ಉಳಿದಿದ್ದು, ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ರೋಹಣಿ ಸಿಂದೂರಿ ವಿರುದ್ದ ಮಾಡಿರುವ ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳಿಗೆ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಂಧೂರಿ, ಮಾನಸಿಕ ಅಸ್ವಸ್ಥತೆ ಬಹುದೊಡ್ಡ ಸಮಸ್ಯೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ವರ್ತಿಸುವುದು ಅಪಾಯಕಾರಿ. ಡಿ.ರೂಪಾ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ.
ನನ್ನ ಮೇಲೆ ಹಗೆ ತೀರಿಸಿಕೊಳ್ಳಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂದುವರಿದು, ವೈಯಕ್ತಿಕ ಹಗೆಯನ್ನಿಟ್ಟುಕೊಂಡು ನನ್ನ ವಿರುದ್ಧ ಸುಳ್ಳು ಹಾಗೂ ವೈಯಕ್ತಿಕ ನಿಂದನೆಯ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ತೆಗೆದ ಫೋಟೊಗಳನ್ನು ನನ್ನ ತೇಜೋವಧೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಫೋಟೊಗಳನ್ನು ನಾನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎಂದು ಆರೋಪಿಸಿರುವ ರೂಪಾ, ಸದರಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ವಿಸ್ ಕಂಡಕ್ಟ್ ರೂಲ್ಸ್ (ಸೇವಾ ನಡತೆ ನಿಯಮ) ಉಲ್ಲಂಘಿಸಿರುವ ರೂಪಾ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುತ್ತೇನೆ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳಿಂದ ನಾನು ಸ್ವಲ್ಪವೂ ವಿಚಲಿತಳಾಗುವುದಿಲ್ಲ. ಕರ್ತವ್ಯವನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ಮುಂದುವರಿಸುತ್ತೇನೆ ಎಂಬುದನ್ನು ಇಂತಹ ಕ್ಷುಲ್ಲಕ ವ್ಯಕ್ತಿಗಳಿಗೆ ತಿಳಿಸಲು ಬಯಸುತ್ತೇನೆ ಎಂದೂ ತಿರುಗೇಟು ನೀಡಿದ್ದಾರೆ.