LATEST NEWS
ಪಿಡಬ್ಲುಡಿ ಗುತ್ತಿಗೆದಾರ ಕಾಂಗ್ರೇಸ್ ಮುಖಂಡ ಪದ್ಮನಾಭ ಕೋಟ್ಯಾನ್ ಮನೆಗೆ ನುಗ್ಗಿ ದರೋಡೆ

ಮಂಗಳೂರು, ಜೂನ್ 22: ಕಾಂಗ್ರೇಸ್ ಮುಖಂಡ ಪಿಡಬ್ಲುಡಿ ಗುತ್ತಿಗೆದಾರ ಪದ್ಮನಾಭ್ ಕೊಟ್ಯಾನ್ ಅವರ ಮನೆಗೆ ದರೋಡೆಕೋರರ ತಂಡವೊಂದು ನುಗ್ಗಿ ಹಲ್ಲೆ ನಡೆಸಿದ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಗರ ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿನ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್‌ಗೆ ನುಗ್ಗಿದ ಸುಮಾರು 9 ಮಂದಿಯ ತಂಡವೊಂದು ದರೋಡೆ ಮಾಡಿದೆ.
ಮಂಗಳೂರು ನಗರದಿಂದ 22 ಕಿಮೀ ದೂರದ ಉಳಾಯಿಬೆಟ್ಟು ಬಳಿಯ ಪೆರ್ಮಂಕಿ ಪದವಿನಲ್ಲಿ ಇವರ ಮನೆಯಿದ್ದು, ರಾತ್ರಿ 8 ಗಂಟೆ ವೇಳೆಗೆ ಪದ್ಮನಾಭ ಕೋಟ್ಯಾನ್ ತನ್ನ ಮನೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗಲೇ ದರೋಡೆಕೋರರು ದಾಳಿ ನಡೆಸಿದ್ದಾರೆ. ಕೋಟ್ಯಾನ್ ಮೇಲೆ ಹಲ್ಲೆ ನಡೆಸಿದ್ದು, ನೆಲಕ್ಕೆ ಬಿದ್ದವರ ಮೇಲೆ ಎದೆ, ಹೊಟ್ಟೆಗೆ ತುಳಿದಿದ್ದಾರೆ. ಈ ವೇಳೆ, ಚೂರಿಯಿಂದ ಕೈ ಮತ್ತು ಕಾಲಿಗೆ ಇರಿದಿದ್ದು, ಹೆದರಿಸಲು ಯತ್ನಿಸಿದ್ದಾರೆ. ಮನೆಯ ಒಳಗಿದ್ದ ಪತ್ನಿ ಶಶಿಪ್ರಭಾ ಕೋಟ್ಯಾನ್ ಮತ್ತು ಮಗ ಪ್ರಥಮ್ ಅವರಿಗೂ ಹಲ್ಲೆ ನಡೆಸಿದ್ದು, ಬೆಡ್ ಶೀಟ್ ಬಳಸಿ ಕಂಬಕ್ಕೆ ಕಟ್ಟಿಹಾಕಿದ್ದು ಚಿನ್ನಾಭರಣಗಳಿದ್ದ ಕಪಾಟಿನ ಕೀಯನ್ನು ಕೇಳಿ ಪಡೆದಿದ್ದಾರೆ.

ಒಂದು ಕಪಾಟು ಓಪನ್ ಮಾಡಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ, ಮನೆಯ ಒಳಗೆಲ್ಲ ತಡಕಾಡಿದ್ದಾರೆ. 9 ಮಂದಿಯಿದ್ದ ಆರೋಪಿಗಳು ಪರಸ್ಪರ ಹಿಂದಿ ಮಾತನಾಡುತ್ತಿದ್ದರು. ಇನ್ನೋವಾ ವಾಹನದಲ್ಲಿ ಬಂದಿದ್ದು, ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಮನೆಯಲ್ಲಿದ್ದ ಫಾರ್ಚುನರ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಮನೆಯಿಂದ ಅನತಿ ದೂರದಲ್ಲಿ ಫಾರ್ಚುನರ್ ಕಾರು ಪತ್ತೆಯಾಗಿದ್ದು, ಬಳಿಕ ತಾವು ಬಂದಿದ್ದ ಇನ್ನೋವಾದಲ್ಲಿಯೇ ಬಂಟ್ವಾಳದ ಕಡೆಗೆ ಪರಾರಿಯಾಗಿದ್ದಾರೆ.
ಪದ್ಮನಾಭ ಕೋಟ್ಯಾನ್ ತನ್ನ ಫಾರ್ಮ್ ಹೌಸ್‌ನಲ್ಲಿದ್ದಾಗ ಮುಸುಕು ಹಾಕಿಕೊಂಡು ಒಳನುಗ್ಗಿದ ದರೋಡೆಕೋರರು ಚೂರಿ ತೋರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ. ಅಲ್ಲದೆ ಪದ್ಮನಾಭ ಕೋಟ್ಯಾನ್ ಮತ್ತವರ ಕುಟುಂಬದ ಸದಸ್ಯರನ್ನು ಬೆಡ್‌ಶೀಟ್‌ನಿಂದ ಕಟ್ಟಿ ಹಾಕಿದ್ದರು. ಈ ಸಂದರ್ಭ ಪದ್ಮನಾಭ ಕೋಟ್ಯಾನ್ ಅವರ ಕೈಗೆ ಗಾಯವಾಗಿದೆ. ದರೋಡೆಕೋರರು ಮನೆಯನ್ನು ಜಾಲಾಡಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಮನೆಯ ಅಂಗಳದಲ್ಲಿದ್ದ ವಾಹನವನ್ನು ಸ್ವಲ್ಪ ದೂರ ಕೊಂಡೊಯ್ದು ಬಳಿಕ ಅಲ್ಲೇ ಅದನ್ನು ಬಿಟ್ಟು ಪರಾರಿಯಾಗಿದ್ದಾರೆ. ದರೋಡೆಕೋರ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.