Connect with us

  DAKSHINA KANNADA

  ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ, ಇದು ಮಂಗಳೂರಿಗರ ದೌರ್ಭಾಗ್ಯ

  ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ, ಇದು ಮಂಗಳೂರಿಗರ ದೌರ್ಬಾಗ್ಯ

  ಮಂಗಳೂರು,ಅಕ್ಟೋಬರ್ 11: ಜನತೆಗೆ ಎಲ್ಲಾ ಭಾಗ್ಯಗಳನ್ನು ನೀಡುತ್ತಿರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಂಗಳೂರಿನ ರಸ್ತೆಗಳಿಗೆ ದುರಸ್ಥಿ ಭಾಗ್ಯ ಮಾತ್ರ ಕರುಣಿಸಿಲ್ಲ. ನಗರದ ಒಳಗಿನ ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಇಂದು ಹೊಂಡ ಗುಂಡಿಗಳಿಂದ ತುಂಬಿ ತುಳುಕುತ್ತಿದೆ.

  ಅದರಲ್ಲೂ ನಗರದ ಸುತ್ತಮುತ್ತಲಿನಲ್ಲಿ ಹಾದು ಹೋಗುವ ರಸ್ತೆಗಳ ನಿರ್ವಹಣೆ ಮಾಡಬೇಕಾದ ಮಂಗಳೂರು ಮಹಾನಗರಪಾಲಿಕೆಯಂತು ಹೊಂಡಗಳೇ ತಮ್ಮ ಸಾಧನೆ ಎನ್ನುವ ರೀತಿಯಲ್ಲಿ ಸಿಕ್ಕ ಸಿಕ್ಕಲ್ಲಿ ಫೋಟೋಗೆ ಫೋಸ್ ಕೊಡುತ್ತಿರುವ ಪೋಸ್ಟರ್ ಗಳೇ ಎದ್ದು ಕಾಣತ್ತಿವೆ. ಅದರಲ್ಲೂ ಮಹಾನಗರ ಪಾಲಿಕೆಯ ನೇತೃತ್ವ ವಹಿಸಿಕೊಂಡ ಮೇಯರಮ್ಮ ದಿನವೊಂದಕ್ಕೆ ಎರಡರಂತೆ ವೇಷಭೂಷಣ ಬದಲಾಯಿಸಿ ಮಾಧ್ಯಮಗಳಿಗೆ ಫೋಸ್ ಕೊಡುವುದನ್ನು ಬಿಟ್ಟು ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸಿ ಅದರ ಮುಂದೆ ನಿಂತು ಫೋಸ್ ಕೊಟ್ಟ ‘ಆ ದಿನಗಳು’ ಯಾವಾಗ ಬರುತ್ತದೋ ಎನ್ನುವ ಬಕ ಪಕ್ಷಿಗಳಂತೆ ಮಂಗಳೂರಿನ ಜನ ಕಾಯುತ್ತಿದ್ದಾರೆ.ನಗರದ ಕದ್ರಿ ಶಿವಭಾಗ್ ರಸ್ತೆ, ನಂತೂರು ಸರ್ಕಲ್ ರಸ್ತೆ, ಬಿಜೈ , ಶಕ್ತಿನಗರ, ಪಡೀಲ್ , ಪಂಪುವೆಲ್, ಬೆಂದೂರುವೆಲ್, ಕಂಕನಾಡಿ,ಕಂಕನಾಡಿ ಬೈಪಾಸ್ ಹೀಗೆ ಎಲ್ಲಾ ಕಡೆಯ ರಸ್ತೆಗಳ ದುರಾವಸ್ಥೆಯನ್ನು ಕೇಳುವವರಿಲ್ಲದಂತಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳೂರು ನಗರ ಪಾಲಿಕೆಯ ರಸ್ತೆಗಳ ಹಾಗೂ ಇತರ ಕಾಮಗಾರಿಗಳಿಗಾಗಿ ನೂರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರು. ಹೀಗೆ ಬಿಡುಗಡೆಯಾದ ಹಣದಿಂದ ನಗರದ ಪ್ರಮುಖ ರಸ್ತೆಗಳು ಕಾಂಕ್ರೀಟೀಕರಣವಾಗಿದ್ದು, ಇನ್ನು ಕೆಲವು ರಸ್ತೆಗಳ ಕಾಂಕ್ರೀಟೀಕರಣದ ಮುಗಿಯುವ ಹಂತದಲ್ಲಿದೆ. ಕಾಂಕ್ರೀಟೀಕರಣ ಸಾಧ್ಯವಾಗದ ರಸ್ತೆಗಳಿಗೆ ಡಾಮರೀಕರಣವನ್ನೂ ಇದೇ ಹಣದಿಂದ ಮಾಡಲಾಗಿತ್ತು. ಆದರೆ ಬಿಜೆಪಿ ಸರಕಾರ ಪತನವಾದ ಬಳಿಕ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆಯನ್ನು ಬಿಜೆಪಿಯಿಂದ ಕಾಂಗ್ರೇಸ್ ಪಕ್ಷ ಕಿತ್ತುಕೊಂಡಿದೆ. ಇದೀಗ ಸರಿ ಸುಮಾರು 3-4 ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಮೇಯರ್ ಮಂಗಳೂರು ನಗರ ಪಾಲಿಕೆಯ ಗದ್ದುಗೆಯಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದ ಕಾಲದಲ್ಲಿ ಹಾಕಿದಂತಹ ರಸ್ತೆಯ ಡಾಮರುಗಳು ಇದೀಗ ಕಿತ್ತು ಬರುತ್ತಿದೆ.ಮಳೆ ಕಿತ್ತು ಹೋದ ಡಾಮರ್ ಗಳ ಜೊತೆಗೆ ಹೊಂಡಗಳೂ ಇದೀಗ ನಿರ್ಮಾಣಗೊಂಡಿದ್ದು, ದ್ವಿಚಕ್ರ ವಾಹನಗಳು ಮುಳುಗುವಷ್ಟರ ಮಟ್ಟಿಗೆ ಇವುಗಳು ಕೊರೆಯಲ್ಪಟ್ಟಿದೆ. ಬೆಂದೂರುವೆಲ್ ಬೈಪಾಸ್ ರಸ್ತೆಯ ಅವಸ್ಥೆಯನ್ನಂತು ಕೇಳುವಂತೆಯೂ ಇಲ್ಲ. ಈ ಹೊಂಡಗಳಿಗೆ ಬಿದ್ದು, ನೂರಕ್ಕೂ ಮಿಕ್ಕಿದ ಬೈಕ್ ಸವಾರರು ನೆಲಕಚ್ಚಿದ್ದರೆ, ಅಷ್ಟೇ ಪ್ರಮಾಣದ ವಾಹನಗಳು ದಿನಂಪ್ರತಿ ಗ್ಯಾರೇಜು ಮುಖ ಕಾಣುವಂತಾಗಿದೆ. ಇದು ರಾಜ್ಯ ಸರಕಾರದ ಗುಂಡಿಯ ಕಥೆಯಾದರೆ, ಇನ್ನು ಕೇಂದ್ರದ ವ್ಯಾಪ್ತಿಗೆ ಬರುವಂತಹ ಬಿ.ಸಿ.ರೋಡ್-ಸುರತ್ಕಲ್ ರಸ್ತೆಯ ಅವ್ಯವಸ್ಥೆಯನ್ನು ಕೇಳವವರೇ ಇಲ್ಲದಂತಾಗಿದೆ. ಚತುಷ್ಪಥ ರಸ್ತೆಯ ಜೊತೆಗೆ ಸರ್ವೀಸ್ ರೋಡ್ ಗಳೂ ಗುಂಡಿಮಯವಾಗಿವೆ. ಹೆದ್ದಾರಿಗಳ ನಿರ್ವಹಣೆಗಾಗಿ ಕೇಂದ್ರ ಸರಕಾರ ಸಾವಿರ ಸಾವಿರ ಕೋಟಿ ರೂಪಾಯಿಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡುವ ಜಿಲ್ಲೆಯ ಸಂಸದರ ಹೇಳಿಕೆಗಳು ಕೇವಲ ಹೇಳಿಕೆಯಾಗಿಯೇ ಉಳಿದಿವೆ. ರಸ್ತೆಯ ದುರಾವಸ್ಥೆಯಿಂದಾಗಿ ಪ್ರತಿನಿತ್ಯ ರಸ್ತೆ ಅವಘಡಗಳು ಸಂಭವಿಸುತ್ತಿದ್ದರೂ, ಇಲಾಖೆಯ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಿಂದ ಎದ್ದಂತೆ ಕಾಣುತ್ತಿಲ್ಲ. ಅಧಿಕಾರಿಗಳನ್ನು ಎಬ್ಬಿಸಬೇಕಾದ ಜನಪ್ರತಿನಿಧಿಗಳು ಕೋಮಾ ಸ್ಥಿತಿಯಲ್ಲಿರುವುದು ಜನಸಾಮಾನ್ಯ ಅಸಹಾಯಕತೆಗೆ ಕಾರಣವಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply