DAKSHINA KANNADA
ಮಂಗಳೂರು ಪೊಲೀಸ್ ಕಮೀಷನರ್ ವರ್ಗಾವಣೆಗೆ ಆಗ್ರಹಿಸಿ ರಸ್ತೆ ತಡೆ ಪ್ರಯತ್ನ, DYFI ಕಾರ್ಯಕರ್ತರ ಬಂಧನ
ಮಂಗಳೂರು : ಮಂಗಳೂರು ಪೊಲೀಸ್ ಕಮೀಷನರ್ ಅವರು ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿದ್ದಾರೆಂದು ಆರೋಪಿಸಿ ಆಯುಕ್ತರ ವರ್ಗಾವಣೆಗೆ ಒತ್ತಾಯಿಸಿ DYFI ದ.ಕ ಜಿಲ್ಲಾ ಸಮಿತಿ ಗುರುವಾರ ನಗರದ ರಾವ್ ಆಂಡ್ ರಾವ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಯಿತು.
ಕಮೀಷನರ್ ಅಗ್ರವಾಲ್ ಹಟಾವೋ ಮಂಗಳೂರು ಭಚಾವೋ ಎಂದು ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಲು ಮುಂದಾದ ಡಿವೈಎಫ್ಐ ಕಾರ್ಯಕರ್ತರನ್ನು ಅಪಾರ ಸಂಖ್ಯೆಯಲ್ಲಿ ನಿಯೋಜಿಸಿದ್ದ ಪೊಲೀಸರು ತಡೆಯಲು ಯತ್ನಿಸಿದರು ಡಿವೈಎಫ್ಐ ಕಾರ್ಯಕರ್ತರನ್ನು ಬಂಧಿಸುವ ವೇಳೆ ಪೊಲೀಸರ ನಡುವೆ ತಿಕ್ಕಾಟ ನಡೆಯಿತು. ಸುಮಾರು 50 ಕ್ಕೂ ಮಿಕ್ಕಿ ಡಿವೈಎಫ್ಐ ನಾಯಕರುಗಳ ಸಹಿತ ಕಾರ್ಯಕರ್ತರನ್ನು ಬಂಧಿಸಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಪೊಲೀಸ್ ಆಯುಕ್ತರಾದ ಅಗ್ರವಾಲ್ ನನ್ನು ನಿಯೋಜಿಸಿದ್ದು ಅಕ್ರಮಗಳನ್ನು ನಿಯಂತ್ರಿಸಲು ಹೊರತು ಹೋರಾಟಗಾರರನ್ನು ನಿಯಂತ್ರಿಸಲಲ್ಲ. ನಗರದಲ್ಲಿ ಮಟ್ಕಾ, ವೇಶ್ಯಾವಾಟಿಕೆ, ಇಸ್ಪೀಟ್ ಕ್ಲಬ್, ಮರಳುಗಾರಿಕೆ ಸಹಿತ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಕ್ರಮಕೈಗೊಳ್ಳದ ನಿಯಂತ್ರಿಸಲಾಗದ ಕಮೀಷನರ್ ಜನಪರವಾಗಿ ನಡೆಯುವ ಚಳುವಳಿಗಳನ್ನು, ಹೋರಾಟಗಾರರನ್ನು ನಿಯಂತ್ರಿಸುವುದು ನೋಡಿದರೆ ಇವರು ಯಾರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತಿದೆ. ಇಂತಹ ಕಮೀಷನರ್ ಮಂಗಳೂರು ನಗರಕ್ಕೆ ಕಪ್ಪು ಚುಕ್ಕೆ ಸರಕಾರ ಈ ಕೂಡಲೇ ಕಮೀಷನರ್ ಅನುಪಮ್ ಅಗ್ರವಾಲ್ ನನ್ನು ವರ್ಗಾಹಿಸಬೇಕು. ಇಲ್ಲದೇ ಹೋದಲ್ಲಿ ಡಿವೈಎಫ್ಐ ಹೋರಾಟ ತೀವೃಗೊಳ್ಳಲಿದೆ ಎಂದರು.ಡಿವೈಎಫ್ಐ ದ.ಕ ಜಿಲ್ಲಾಧಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ಕಮಿಷನರ್ ಮೇಲೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಕೈಗೊಳ್ಳಲಿದ್ದು ಸರಕಾರ ಈ ಕೂಡಲೇ ಪೊಲೀಸ್ ಕಮಿಷನರನ್ನು ವರ್ಗಾಹಿಸಬೇಕು ಇಲ್ಲದೇ ಹೋದಲ್ಲಿ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಕೋಶಾಧಿಕಾರಿ ಮನೋಜ್ ವಾಮಂಜೂರು, ಡಿವೈಎಫ್ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ನಿತಿನ್ ಕುತ್ತಾರ್, ಸುನೀಲ್ ತೇವುಲ, ಮಾಧುರಿ ಬೋಳಾರ, ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಮಹಾಬಲ ದೆಪ್ಪೆಲಿಮಾರ್, ಪ್ರಮಿಳಾ ಶಕ್ತಿನಗರ, ಆಶಾ ಬೋಳೂರು, ಪ್ರಮಿಳಾ ದೇವಾಡಿಗ, ಅಸುಂತ ಡಿಸೋಜ, ಯೋಗಿತಾ, ಅಶ್ರಫ್ ಹರೇಕಳ, ನೌಶದ್ ಬೆಂಗರೆ, ಹನೀಫ್ ಬೆಂಗರೆ ಮುಂತಾದವರು ಉಪಸ್ಥಿತರಿದ್ದರು.