LATEST NEWS
ಬ್ರಿಟನ್ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟ,ಸುಧಾಮೂರ್ತಿ ಅಳಿಯ ರಿಷಿ ಸುನಕ್ ಪಕ್ಷಕ್ಕೆ ಸೋಲು..!
ಲಂಡನ್: ಬ್ರಿಟನ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇದೀಗ ಅಧಿಕೃತವಾಗಿ ಪ್ರಕಟವಾಗಿದ್ದು, ಸುಧಾಮೂರ್ತಿ ಅಳಿಯ ರಿಷಿ ಸುನಕ್ (Rishi Sunak) ಪಕ್ಷ ಸೋಲುಂಡಿದೆ.
ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಎದುರು ಪ್ರಧಾನಿ ರಿಷಿ ಸುನಕ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಇಂದು ಬೆಳಗ್ಗೆ ಪ್ರತಿಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿತ್ತು.
ಈಗ 410 ಸೀಟ್ ಪಡೆದುಕೊಂಡಿರುವ ಲೇಬರ್ ಪಾರ್ಟಿ, ಸರ್ಕಾರ ರಚಿಸಲು ಬೇಕಿದ್ದ 326 ಸ್ಥಾನಗಳನ್ನು ಬಹುಮತದಿಂದ ಗೆದ್ದಿದೆ. ಮೊದಲ ಹಂತದಲ್ಲೇ ಸೋಲಿನ ಸುಳಿವು ಸಿಗುತ್ತಿದ್ದಂತೆ ಆಘಾತಕ್ಕೊಳಗಾದ ರಿಷಿ ಸುನಕ್, ತಮ್ಮ ಸೋಲು ಒಪ್ಪಿಕೊಂಡರು. ಈ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಗೆಲುವು ಸಾಧಿಸಿದೆ ಮತ್ತು ನಾನು ಕೀರ್ ಸ್ಟಾರ್ಮರ್ರನ್ನು ಗೆಲುವಿಗಾಗಿ ಅಭಿನಂದಿಸುತ್ತೇನೆ. ಇಂದು ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಹಸ್ತಾಂತರವಾಗುತ್ತದೆ ಹಾಗೂ ಎಲ್ಲ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದರು.
ಇನ್ನು ಅಧಿಕಾರದ ಚುಕ್ಕಾಣಿ ಹಿಡಿದ ಲೇವರ್ ಪಕ್ಷದ ಕೀರ್ ಸ್ಟಾರ್ಮರ್ಗೆ ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ರಿಷಿ ಸುನಕ್ ಅವರಿಗೆ ಬೆನ್ನುತಟ್ಟಿದರು. “ಯುಕೆಯಲ್ಲಿ ನಿಮ್ಮ ನಾಯಕತ್ವ ಶ್ಲಾಘನೀಯ. ಧನ್ಯವಾದ ರಿಷಿ. ಭಾರತ ಮತ್ತು ಯುಕೆ ನಡುವಿನ ಸಂಬಂಧ ಗಟ್ಟಿಮಾಡುವಲ್ಲಿ ನಿಮ್ಮ ಆಡಳಿತ ಹೆಚ್ಚು ಕೊಡುಗೆ ನೀಡಿದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು” ಎಂದು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.