Connect with us

    FILM

    ಶಿವಾಜಿ ಮಹಾರಾಜ್ ಆಗಿ ರಿಷಭ್ ಶೆಟ್ಟಿ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ ವಿರೋಧ ಚರ್ಚೆ

    ಬೆಂಗಳೂರು ಡಿಸೆಂಬರ್ 04: ಕಾಂತಾರ ಸಿನೆಮಾ ಮೂಲಕ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ರಿಷಬ್ ಶೆಟ್ಟಿ ಅವರ ಬಾಲಿವುಡ್ ನ ಮೊದಲ ಸಿನೆಮಾಕ್ಕೆ ಇದೀಗ ಆಕ್ರೋಶ ಎದುರಾಗಿದೆ.


    ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಲ್ಲಿ ನಟಿಸುವುದಾಗಿ ಘೋಷಣೆ ಮಾಡಿ ಅದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ ವಿರೋಧ ಚರ್ಚೆಗಳು ಪ್ರಾರಂಭವಾದವು. ಕರ್ನಾಟಕದ ಪಾಲಿಗೆ ಶಿವಾಜಿ ದಾಳಿಕೋರ, ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು ಅಂತ ಪ್ರಶ್ನಿಸಿ ಫ್ಯಾನ್ಸ್ ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.‌


    ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಕೆಲ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗಿದೆ.
    ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು , ಕುಮಟಾ ವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದಿ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಅಭಿಮಾನಿಯೊಬ್ಬ ಎಕ್ಸ್‌ನಲ್ಲಿ ರಿಷಬ್‌ಗೆ ಪ್ರಶ್ನಿಸಿದ್ದಾರೆ.


    ಬಾಲಿವುಡ್ ಡೈರೆಕ್ಟರ್ ಸಂದೀಪ್ ಸಿಂಗ್ ಅವರ ಹಿಸ್ಟೋರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್ ನಟಿಸಲಿದ್ದಾರೆ. ಸದ್ಯ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡಿರುವ ಲುಕ್ ರಿವೀಲ್ ಆಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಕೂಡ ಚಿತ್ರತಂಡ ಅನೌನ್ಸ್ ಮಾಡಿದೆ.
    ಇನ್ನೂ ರಿಷಬ್ ಶೆಟ್ಟಿ ಪರವಾಗಿ ಕೂಡ ಚರ್ಚೆ ಜೋರಾಗಿದೆ. ಹಿಂದೂ ಸಾಮ್ರಾಟ್ ನ ಚಿತ್ರವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದಾರೆ. ಹಿಂದೂಗಳಿಗಾಗಿ ಹೋರಾಡಿದ ವೀರ ಶಿವಾಜಿ, ಆ ಪಾತ್ರಕ್ಕೆ ರಿಷಬ್ ಶೆಟ್ಟಿಯೇ ಸೂಕ್ತ ಎಂದು ಕೆಲವು ಹೇಳಿದ್ದಾರೆ. ಸದ್ಯ ಕಾಂತಾರ ಚಾಪ್ಟರ್ 1 ರ ಶೂಟಿಂಗ್ ನಡುವೆ ರಿಷಬ್ ಶೆಟ್ಟಿ ಸಣ್ಣ ವಿವಾದಕ್ಕೆ ಸಿಕ್ಕಿಹಾಕಿಕೊಂಡಂತಾಗಿದೆ. ಈ ವಿವಾದದ ಬಗ್ಗೆ ರಿಷಬ್ ಶೆಟ್ಟಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *