National
ರಾಜಸ್ಥಾನ ಬಳಿಕ ಜಾರ್ಖಂಡಿನಲ್ಲೂ ಕಾಂಗ್ರೆಸ್ ರೆಬೆಲ್ ; ಬಿಜೆಪಿಯತ್ತ ಶಾಸಕರು ?

ರಾಂಚಿ, ಆಗಸ್ಟ್ 1: ಮಧ್ಯಪ್ರದೇಶ, ರಾಜಸ್ಥಾನದ ಬಳಿಕ ಜಾರ್ಖಂಡಿನಲ್ಲಿಯೂ ಪೊಲಿಟಿಕಲ್ ಹೈಡ್ರಾಮಾ ಶುರುವಾಗಿದೆ. ಜೆಎಂಎಂ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಗ್ಗೆ ಮೈತ್ರಿ ಪಕ್ಷದ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಸೊರೇನ್ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ದೆಹಲಿ ನಾಯಕರಿಗೆ ದೂರು ನೀಡಿದ್ದಾರೆ. ಇದೇ ವೇಳೆ, ಒಂದಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ವಾಲಿದ್ದಾರೆ ಎನ್ನಲಾಗುತ್ತಿದ್ದು, ಜಾರ್ಖಂಡಿನಲ್ಲಿಯೂ ರಾಜಸ್ಥಾನ ಮಾದರಿ ಬಿಕ್ಕಟ್ಟು ಕಾಣಿಸಿಕೊಂಡಿದೆ.
ಜಾರ್ಖಂಡಿನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳ ಸರಕಾರ ಆಡಳಿತದಲ್ಲಿದೆ. ಸಿಎಂ ಹೇಮಂತ್ ಸೊರೇನ್ ಮತ್ತು ತಮ್ಮದೇ ಪಕ್ಷದ ಸಚಿವರ ಬಗ್ಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ಹೇಮಂತ್ ಸೊರೇನ್, 11 ಮಂದಿ ಸಚಿವ ಸ್ಥಾನಗಳನ್ನು ಮಾತ್ರ ತುಂಬಿದ್ದು, ಒಂದು ಸ್ಥಾನ ಖಾಲಿ ಇಟ್ಟಿದ್ದಾರೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸಿನ ಹಿರಿಯ ಶಾಸಕರು ಆಡಳಿತದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಲು ತೊಡಗಿದ್ದಾರೆ. ಇದೇ ವೇಳೆ, ಕಾಂಗ್ರೆಸಿನ ಮೂವರು ಹಿರಿಯ ಶಾಸಕರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ರಾಹುಲ್ ಭೇಟಿ ಸಾಧ್ಯವಾಗಿಲ್ಲ. ಹಿರಿಯ ನಾಯಕ ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಆದರೆ, ದೆಹಲಿ ನಾಯಕರು ತಮ್ಮ ಅಹವಾಲಿಗೆ ಸ್ಪಂದಿಸಿಲ್ಲ ಎನ್ನುತ್ತಿರುವ ಕಾಂಗ್ರೆಸಿನ ರೆಬೆಲ್ ಗುಂಪು, ಜಾರ್ಖಂಡ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಮೇಶ್ವರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದ ಜೆವಿಎಂ ಪಕ್ಷದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, ಮತ್ತೆ ಸರಕಾರ ರಚನೆಗೆ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೆ ಕಾಂಗ್ರೆಸಿನ ಒಂದಷ್ಟು ಶಾಸಕರು ಬಿಜೆಪಿಯತ್ತ ವಾಲಿದರೂ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಲಾರದು. ಯಾಕಂದ್ರೆ, 81 ಸದಸ್ಯಬಲದ ಜಾರ್ಖಂಡಿನಲ್ಲಿ ಜೆಎಂಎಂ 29, ಕಾಂಗ್ರೆಸ್ 15, ಬಿಜೆಪಿ 26 ಸ್ಥಾನಗಳನ್ನು ಹೊಂದಿದ್ದರೆ, ಆರ್ ಜೆಡಿ, ಎನ್ ಸಿಪಿ ಮತ್ತು ಸಿಪಿಐಎಂ ತಲಾ ಒಂದೊಂದು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸಿನ 15 ಶಾಸಕರೂ ಬಿಜೆಪಿಯತ್ತ ಬಂದರೆ ಮಾತ್ರ ಸರಕಾರ ಬೀಳುವ ಸಾಧ್ಯತೆಯಿದೆ. ಇನ್ನು ಆರ್ ಜೆಡಿ, ಎನ್ ಸಿಪಿಯ ಶಾಸಕರ ನಡೆಯ ಮೇಲೆ ಬಿಜೆಪಿ ಸರಕಾರ ಪ್ರಯತ್ನದ ಯಶಸ್ಸು ನಿಂತಿದೆ.