UDUPI
ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಿ : ಶಿವಾನಂದ ಕಾಪಶಿ
ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಿ : ಶಿವಾನಂದ ಕಾಪಶಿ
ಉಡುಪಿ, ಡಿಸೆಂಬರ್ 11: ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ಹಕ್ಕುಗಳನ್ನು ನೀಡಿದೆ.
ನಾಗರೀಕರು ತಮಗೆ ನೀಡಿದ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಜೊತೆಗೆ, ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು.
ಈ ಮೂಲಕ, ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಅವರು ಸೋಮವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ(ರಿ) ಉಡುಪಿ , ಜಾಗೃತಿ ಜನಸೇವಾ ಸಂಸ್ಥೆ ತೋನ್ಸೆ ಮತ್ತು ಸಾಲಿಹತ್ ಮಹಿಳಾ ಪದವಿ ಕಾಲೇಜು ಹೂಡೆ ಇವರ ಸಹಯೋಗದಲ್ಲಿ ನಡೆದ ,
ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ, ಶಾಂತಿ ಸೂಚಕವಾದ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಸಂಘಜೀವಿಯಾಗಿದ್ದು, ಸಮಾಜದಲ್ಲಿ ಸಂಘಟಿತ ಜೀವನ ಅನಿವಾರ್ಯ , ಈ ಸಂದರ್ಭದಲ್ಲಿ ಇತರರು ಹಕ್ಕುಗಳನ್ನು ಉಲ್ಲಂಘಿಸದೆ , ಅವುಗಳನ್ನು ಗೌರವಿಸಬೇಕು.
ಮಾನವ ಹಕ್ಕುಗಳ ಕುರಿತು ಸಮಾಜದ ಪ್ರತಿಯೊಬ್ಬರೂ ನಾಗರೀಕರೂ ಅರಿತಿರಬೇಕು,
ಮಾನವ ಹಕ್ಕುಗಳನ್ನು ಗೌರವಿಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ಜೀವನ ಸಾಧ್ಯವಾಗಲಿದೆ ಎಂದು ಕಾಪಶಿ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾತನಾಡಿ, ಮಾನವ ಹಕ್ಕುಗಳನ್ನು ಅರಿಯುವ ಜೊತೆಗೆ, ಅದರ ಉಲ್ಲಂಘನೆಗೆ ಇರುವ ಶಿಕ್ಷೆಯ ಕುರಿತು ಸಹ ಅರಿತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ , ಮಾನವ ಹಕ್ಕುಗಳ ದಿನದ ಪ್ರತಿಜ್ಞೆ ಭೋದಿಸಿದರು.
ನಾವು ಬದುಕಬೇಕು.ಮತ್ತೊಬ್ಬರನ್ನೂ ಬದುಕಲು ಬಿಡಬೇಕು ಇದೇ ಮಾನವ ಹಕ್ಕುಗಳ ಪ್ರಮುಖ ಸಂದೇಶ ಎಂದು ಹೇಳಿದರು.
ನ್ಯಾಯವಾದಿ ಹಮ್ಜತ್ ಹೆಜಮಾಡಿ ಕೋಡಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ , ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಜಿಯಾ ಸಾದಿಕ್, ತಾ.ಪಂ. ಸದಸ್ಯೆ ಸುಲೋಚನಾ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ , ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕ ಸಂಪತ್,
ಉಡುಪಿ ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಮಾನವ ಹಕ್ಕು ಆಯೋಗದ ಸದಸ್ಯ ಇನ್ನಾ ಉದಯ ಕುಮಾರ್ ಶೆಟ್ಟಿ,ಸಾಲಿಹತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ, ಪ್ರಾಂಶುಪಾಲೆ ಡಾ. ಸಲೀನಾ,ಜಾಗೃತಿ ಜನಸೇವಾ ಸಂಸ್ಥೆಯ ಸಂಚಾಲಕ, ವೆಂಕಟೇಶ್ ಜಿ.ಕುಂದರ್ ,ಆಡಳಿತಾಧಿಕಾರಿ ಅಸ್ಲಾಂ ಬೈಕಾಡಿ ಮತ್ತಿತರರು ಉಪಸ್ಥಿತರಿದ್ದರು.