ಅಕ್ರಮ ಮರಳ ಸಾಗಾಟ ವರದಿಗೆ ತೆರಳಿದ ರಿಪೋರ್ಟರ್ ಮೇಲೆ ಹಲ್ಲೆ

ಪುತ್ತೂರು ಜೂನ್ 4: ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ವರದಿಗಾಗಿ ತೆರಳಿದ ವರದಿಗಾರನಿಗೆ ಮರಳುದಂಧೆಕೋರರು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಕಡಬ ಸಮೀಪದ ಕೋಡಿಂಬಾಳ ಎಂಬಲ್ಲಿ ನಡೆದಿದೆ.

ಖಾಸಗಿ ಕೇಬಲ್ ಟಿವಿ ವರದಿಗಾರ ಗಣೇಶ್ ಎಂಬವರು ಕೋಡಿಂಬಾಳದ ಕೋರಿಯಾರ್ ಎಂಬಲ್ಲಿ ಕುಮಾರಧಾರಾ ನದಿಯಿಂದ ಮರಳನ್ನು ತೆಗೆದು ಸಾಗಿಸುತ್ತಿದ್ದ ಸ್ಥಳಕ್ಕೆ ವರದಿಗಾಗಿ ತೆರಳಿದ್ದರು.

ಈ ಸಂದರ್ಭದಲ್ಲಿ ಗಣೇಶ್ ಮೇಲೆ ಮರಳು ಸಾಗಾಟದಲ್ಲಿ ನಿರತರಾದ ಗುಂಪು ಹಲ್ಲೆ ನಡೆಸಿದೆ. ಕೋರಿಯಾರ್ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಲಾರಿಗಳನ್ನು ಚಲಾಯಿಸಿ, ನದಿಯಿಂದ ಜೆಸಿಬಿ ಮೂಲಕ ಮರಳನ್ನು ಎತ್ತಲಾಗುತ್ತಿದ್ದು, ಈ ರೀತಿ ಮರಳು ಸಾಗಾಟ ಅಕ್ರಮ ಎಂದು ಪ್ರಶ್ನಿಸಿದ ವರದಿಗಾರನಿಗೆ ಹಲ್ಲೆ ನಡೆಸಲಾಗಿದೆ.

ಈ ಪ್ರದೇಶದಲ್ಲಿ ತೆಗೆದ ಮರಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಮಾತ್ರ ಉಪಯೋಗಿಸಬೇಕೆಂಬ ಷರತ್ತಿದ್ದರೂ, ಮರಳು ತೆಗೆಯುವ ವ್ಯಕ್ತಿಗಳು ಅಕ್ರಮವಾಗಿ ಇಲ್ಲಿಂದ ಬೇರೆ ಕಡೆಗಳಿಗೆ ಮರಳನ್ನು ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ವರದಿಗಾಗಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ವರದಿಗಾರ ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments