Connect with us

    LATEST NEWS

    ಬಳಕೆಯಲ್ಲಿz ಇಲ್ಲದ 65 ಕಾನೂನುಗಳ ರದ್ದು: ಕಾನೂನು ಸಚಿವ ಕಿರಣ್‌ ರಿಜಿಜು

    ಪಣಜಿ, ಮಾರ್ಚ್ 06: ‘ಕೇಂದ್ರ ಸರ್ಕಾರವು ಇದೇ 13ರಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಬಳಕೆಯಲ್ಲಿ ಇಲ್ಲದ 65 ಕಾನೂನುಗಳು ಹಾಗೂ ಇತರೆ ನಿಬಂಧನೆಗಳನ್ನು ರದ್ದುಗೊಳಿಸುವ ಮಸೂದೆಯೊಂದನ್ನು ಮಂಡಿಸಲಿದೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದರು.

    ಇಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 23ನೇ ಕಾಮನ್‌ವೆಲ್ತ್‌ ಕಾನೂನು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ವಿವಿಧ ನ್ಯಾಯಾಲಯಗಳಲ್ಲಿ 4.98 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಇವೆ. ತಂತ್ರಜ್ಞಾನದ ಬಳಕೆ ಮೂಲಕ ಇವುಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು. ‘ಕಾಗದ ರಹಿತ ನ್ಯಾಯಾಂಗ’ ವ್ಯವಸ್ಥೆ ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ’ ಎಂದರು.

    ‘ಕೇಂದ್ರ ಸರ್ಕಾರವು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದೆ. ದೇಶದ ಎಲ್ಲಾ ನಾಗರಿಕರು ಇದರ ಫಲಾನುಭವಿಗಳಾಗಿದ್ದಾರೆ. ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ‍‍ಪ್ರತಿಯೊಬ್ಬ ನಾಗರಿಕರ ಅಹವಾಲು ಆಲಿಸುವುದು ತುಂಬಾ ಅಗತ್ಯ’ ಎಂದು ಹೇಳಿದರು.

    ‘ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವುದಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಮುಂಚೂಣಿಯಲ್ಲಿದೆ. ಈ ಸಂಬಂಧ ಸರ್ಕಾರ ರೂಪಿಸಿರುವ ನೀತಿಗಳು ಯಶಸ್ವಿಯಾಗಿವೆ. ಕಾನೂನುಗಳು ಇರುವುದೇ ಜನರಿಗಾಗಿ ಎಂಬುದನ್ನು ನಾವು ನಂಬುತ್ತೇವೆ. ಅಂತಹ ಕಾನೂನುಗಳೇ ಅಡೆತಡೆಯಾಗಿ ಮಾರ್ಪಟ್ಟರೆ, ಅವುಗಳ ಅನುಸರಣೆಯು ಜನರ ಜೀವನದ ಮೇಲೆ ಹೊರೆಯಾಗಿ ಪರಿಣಮಿಸುತ್ತವೆ. ಹೀಗಾಗಿ ಅಂತಹ ನಿಬಂಧನೆಗಳನ್ನು ತೆಗೆದು ಹಾಕುವುದೇ ಸೂಕ್ತ’ ಎಂದು ಸಚಿವರು ಅಭಿಪ್ರಾಯಪಟ್ಟರು.

    ‘ಕಳೆದ ಎಂಟೂವರೆ ವರ್ಷಗಳಲ್ಲಿ ನಾವು ಬಳಕೆಯಲ್ಲಿ ಇಲ್ಲದ ಹಾಗೂ ಅನಗತ್ಯವಾಗಿರುವ 1,486 ಕಾನೂನುಗಳನ್ನು ರದ್ದುಪಡಿಸಿದ್ದೇವೆ. ಇಂತಹ ಇನ್ನೂ 65 ಕಾನೂನುಗಳನ್ನು ರದ್ದುಪಡಿಸುವ ಮಸೂದೆಯನ್ನು ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಿದ್ದೇನೆ’ ಎಂದರು.

    ‘ದೇಶದ ವಿವಿಧ ಸ್ತರಗಳಲ್ಲಿನ ನ್ಯಾಯಾಲಯಗಳಲ್ಲಿ 4.98 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಹೊಸ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥವು ಅಷ್ಟು ಸುಲಭದ್ದಲ್ಲ. ಹೀಗಿದ್ದರೂ ದೇಶದ ನ್ಯಾಯಾಧೀಶರು ಈ ದಿಸೆಯಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈ ಸಮಸ್ಯೆಯು ಇನ್ನಷ್ಟು ಸವಾಲಾಗಿ ಪರಿಣಮಿಸಿದೆ. ಸಾಮಾನ್ಯ ಸಂದರ್ಭಗಳಲ್ಲಿ ನ್ಯಾಯಾಧೀಶರೊಬ್ಬರು ದಿನದಲ್ಲಿ ಸರಾಸರಿ 50 ರಿಂದ 60 ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾರೆ. ಕೆಲ ನ್ಯಾಯಾಧೀಶರು ದಿನದಲ್ಲಿ 200 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದೂ ಇದೆ. ಹೀಗಿದ್ದರೂ ಬಾಕಿ ‍ಪ್ರಕರಣಗಳ ಸಂಖ್ಯೆಯು ಏರುತ್ತಲೇ ಇದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ತಂತ್ರಜ್ಞಾನದ ಮೊರೆ ಹೋಗಿದೆ’ ಎಂದು ವಿವರಿಸಿದರು.

    ‘ನಾವು ಇ–ನ್ಯಾಯಾಲಯಗಳನ್ನು ಶುರುಮಾಡಿದ್ದೇವೆ. ವಿಶೇಷ ಯೋಜನೆಗಳು ಹಂತ–3ನ್ನೂ ಆರಂಭಿಸಿದ್ದೇವೆ. ಅತಿ ಶೀಘ್ರದಲ್ಲೇ ನಾವು ಮಧ್ಯಸ್ಥಿಕೆ ಮಸೂದೆಯನ್ನು ಮಂಡಿಸಲಿದ್ದೇವೆ. ಈ ದೇಶದಲ್ಲಿ ಮಧ್ಯಸ್ಥಿಕೆಯನ್ನು ಸಾಂಸ್ಥಿಕಗೊಳಿಸುವುದಕ್ಕೆ ಇದು ಸಹಕಾರಿಯಾಗಲಿದೆ’ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *