LATEST NEWS
ದಸರಾ ಆರಂಭಕ್ಕಿಂತ ಮುಂಚೆ ಸಂಪರ್ಕ ರಸ್ತೆ ಸರಿಪಡಿಸಿ – ಸಚಿವ ಯು ಟಿ ಖಾದರ್
ದಸರಾ ಆರಂಭಕ್ಕಿಂತ ಮುಂಚೆ ಸಂಪರ್ಕ ರಸ್ತೆ ಸರಿಪಡಿಸಿ – ಸಚಿವ ಯು ಟಿ ಖಾದರ್
ಮಂಗಳೂರು ಸೆಪ್ಟಂಬರ್ 26 :- ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ಎದುರಿಸಿದ ಅತಿವೃಷ್ಠಿಯಿಂದಾಗಿ ಜಿಲ್ಲೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರು ದಸರಾ ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಸವಾರರಿಗೆ, ಪ್ರವಾಸಿಗಳಿಗೆ ಸಂಚಾರದಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಜನರಿಂದ ರಸ್ತೆ ಸಂಪರ್ಕ ಕುರಿತು ಹಲವು ದೂರುಗಳು ಬರುತ್ತಿದ್ದು ಅಧಿಕಾರಿಗಳು ರಸ್ತೆ ದುರಸ್ತಿಯನ್ನು ಶೀಘ್ರವೇ ಅಭಿವೃದ್ಧಿಪಡಿಸಲು ಸೂಚಿಸಿದರು.
ಅತಿವೃಷ್ಠಿಯಡಿ ಪ್ರಸಕ್ತ ಸಾಲಿನಲ್ಲಿ ಇಲಾಖೆಗಳಿಗೆ ನೇರವಾಗಿ ಅನುದಾನ ಬಂದಿದ್ದು, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಅನುದಾನ ಮತ್ತು ಕಾರ್ಯಾನುಷ್ಠಾನ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸಸಿರಾಜ್ ಸೆಂಥಿಲ್ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಿ.ಸಿ. ರೋಡಿನಿಂದ ಅಡ್ಡಹೊಳೆಯವರೆಗೆ ರಸ್ತೆ ಕಾಮಗಾರಿ ಅಭಿವೃದ್ಧಿಯಲ್ಲಿದ್ದು ಈ ಪ್ರದೇಶದಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಸೂಚಿಸಿದರು. ಭಾರೀ ವಾಹನಗಳು ಆರಂಭವಾದರೆ ರಸ್ತೆ ಅಗೆತ ಮತ್ತು ಕಾಮಗಾರಿಯಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.
ಚಾರ್ಮಾಡಿ ತುರ್ತು ರಸ್ತೆ ದುರಸ್ತಿಗೆ 184 ಲಕ್ಷ ರೂ. ಗಳು ಬಿಡುಗಡೆಯಾಗಿದ್ದು ದುರಸ್ತಿ ನಡೆಸಲಾಗುವುದು. ಶಾಶ್ವತ ದುರಸ್ತಿ ಕಾಮಗಾರಿಗೆ 126 ಕೋಟಿಗಳ ಯೋಜನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಬಳಿಕ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುವುದು.
ಗುರುಪುರ ಸೇತುವೆಗೆ ಸಂಬಂಧಿಸಿದಂತೆ 37.84 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಈ ಯೋಜನೆ ಎರಡು ವರ್ಷದೊಳಗೆ ಸಂಪೂರ್ಣಗೊಳ್ಳಲಿದೆ ಎಂದು ಇಂಜಿನಿಯರ್ ಸಚಿವರಿಗೆ ಉತ್ತರಿಸಿದರು.
ಇದೇ ವೇಳೆ ಹಳೆಯ ಸೇತುವೆ ಫಿಟ್‍ನೆಸ್ ವರದಿ ಇನ್ನಷ್ಟೇ ಬರಬೇಕಿದೆ ಎಂದರು. ಲೋಕೋಪಯೋಗಿ ಇಲಾಖೆ ರಸ್ತೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದ ಸಚಿವರು, ವಿಮಾನ ನಿಲ್ದಾಣ ರಸ್ತೆ ಮತ್ತು ವಿಶ್ವವಿದ್ಯಾನಿಲಯ ರಸ್ತೆ ಗುರುಪುರ ರಸ್ತೆಗೆ ಪ್ಯಾಚ್ ವರ್ಕ್ ನಡೆಸಿ ಡಾಮರೀಕರಣ ಸಾಧ್ಯವಿದ್ದಲ್ಲಿ ಅದನ್ನೂ ದಸರೆಗೆ ಮುಂಚೆಮಾಡಿ ಎಂದು ಸಚಿವರು ಸೂಚಿಸಿದರು.
ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಡಿ ನಿರ್ವಹಿಸಲ್ಟಡುವ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಆದ್ಯತೆಯಡಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಕೊರತೆ ಕಾಡದಂತೆ ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು.