DAKSHINA KANNADA
ಕರಾವಳಿಯಲ್ಲಿ ರೆಡ್ ಅಲರ್ಟ್, ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಭೀತಿ, ಇಂದು ದ.ಕ, ಉಡುಪಿ ಜಿಲ್ಲೆಯ ಶಾಲಾ- ಪ.ಪೂ. ಕಾಲೇಜುಗಳಿಗೆ ರಜೆ ಘೋಷಣೆ..!
ಉಡುಪಿ- ಮಂಗಳೂರು : ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಿಡಿಲು ಗುಡುಗಿನ ಮಳೆಯಾಗುವ ಸಂಭವವಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಮುಂದಿನ 48 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ . ಇನ್ನು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರಿಗೆ ಮತ್ತು ಶಿವಮೊಗ್ಗಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಜೂನ್ 7 ರಿಂದ 9 ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು 30 ರಿಂದ 40 ಕಿಲೋಮೀಟರ್ ಪ್ರತಿ ಘಂಟೆಗೆ ಇರಲಿದ್ದು, ಅಲ್ಲಿಯೂ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ.
ಉಡುಪಿ ಜಿಲ್ಲೆಯ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿಯುವ ಭೀತಿ ಹೆಚ್ಚಾಗಿದೆ. ಬೈಂದೂರು ತಾಲೂಕು, ಶಿರೂರು ಸಮೀಪದಲ್ಲಿ ಗುಡ್ಡ ಜರಿಯುವ ಸಾಧ್ಯತೆ ಇದೆ. ಐಆರ್‌ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಶತಶಪಥ ಕಾಮಗಾರಿಯ ವೇಳೆ ಗುಡ್ಡ ಕೊರೆಯಲಾಗಿತ್ತು. ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಗುಡ್ಡ ಜರಿಯುವ ಭೀತಿ ಇದ್ದು ಕುಸಿದರೆ, ಉತ್ತರ ಕನ್ನಡಕ್ಕೆ ಸಂಪರ್ಕ ಕಡಿವಾಗುವ ಭೀತಿ ಎದುರಾಗಿದೆ.