LATEST NEWS
ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ – ಜುಲೈ 15 ರಂದು ರೆಡ್ ಅಲರ್ಟ್ ಘೋಷಣೆ

ಮಂಗಳೂರು ಜುಲೈ 14 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಾಳೆ ಜುಲೈ 15 ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ರೆಡ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಹಾಸನ ಹಾಗೂ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿಯೂ ಭಾರಿ ಮಳೆಯ ಜತೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಉದ್ದಕ್ಕೂ ಬಿರುಗಾಳಿಯ ಆರ್ಭಟ ಹೆಚ್ಚಿರುವ ಸಾಧ್ಯತೆಯಿದೆ. ಗಂಟೆಗೆ 35 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಸಮುದ್ರದಲ್ಲಿ ಭಾರಿ ಅಲೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ, ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರ ವಹಿಸಬೇಕು. ಸಮುದ್ರದ ದಡದಲ್ಲಿ ಮನೋರಂಜನಾ ಚಟುವಟಿಕೆಗಳನ್ನು ನಡೆಸುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.