LATEST NEWS
ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ -ಮೇ 28ರವರೆಗೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು ಮೇ 24: ಕರ್ನಾಟಕ ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಉಡುಪಿ ದಕ್ಷಿಣಕನ್ನಡದಾದ್ಯಂದ ಮಳೆ ಮುಂದುವರೆದಿದ್ದು, ಮೇ 28 ರವರೆಗೂ ಕರ್ನಾಟಕ ಕರಾವಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ತಾಸುಗಳಲ್ಲಿ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿರ್ತಾಡಿಯಲ್ಲಿ ಗರಿಷ್ಠ 18 ಸೆಂ.ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆಯಲ್ಲಿ 17.2 ಸೆಂ.ಮೀ, ಮರೋಡಿಯಲ್ಲಿ 15.4 ಸೆಂ.ಮೀ, ಲಾಯಿಲದಲ್ಲಿ 11.6 ಸೆಂ.ಮೀ, ಮಂಗಳೂರಿನ ಬಾಳದಲ್ಲಿ 13 ಸೆಂ.ಮೀ, ಎಕ್ಕೂರಿನಲ್ಲಿ 12.7 ಸೆಂ.ಮೀ, ಕುಕ್ಕಿಪಾಡಿಯಲ್ಲಿ 12.2 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ರಾಯಿಯಲ್ಲಿ 10.7 ಸೆಂ.ಮೀ, ಕಾವಳಪದವಿನಲ್ಲಿ 10.6 ಸೆಂ.ಮೀ, ಕಾವಳಮೂಡೂರಿನಲ್ಲಿ 10.4 ಸೆಂ.ಮೀ, ಸರಪಾಡಿಯಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಶನಿವಾರದಿಂದ ಮೇ 28ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 40ರಿಂದ 50ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ಇನ್ನು 24 ಗಂಟೆಯಲ್ಲಿ ಕೇರಳಕ್ಕೆ ಮುಂಗಾರು ಮಳೆ ಆಗಮಿಸುವ ಸಾಧ್ಯತೆ ಇದೆ.
ಮಂಗಳೂರಿನ ಜೆಪ್ಪುಮಹಾಕಾಳಿಪಡ್ಪು ಶೆಟ್ಟಿ ಬೆಟ್ಟು ಸಮೀಪ ರೈಲ್ವೆ ಅಂಡರ್‌ಪಾಸ್ ಮತ್ತು ಸ್ಮಾರ್ಟ್‌ಸಿಟಿ ರಸ್ತೆಯ ಮಂದಗತಿ ಕಾಮಗಾರಿಯಿಂದ ಮುಂಗಾರು ಪೂರ್ವ ಮಳೆಗೆ ಸ್ಥಳೀಯ ಪರಿಸರದಲ್ಲಿ ನೀರು ನಿಂತು ವಿವಿಧ ರೀತಿಯ ಸಮಸ್ಯೆ ಸೃಷ್ಟಿಯಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.