LATEST NEWS
ಭೂಗತ ಪಾತಕಿ ರವಿಪೂಜಾರಿ ಎರೆಸ್ಟ್ : ಆಫ್ರಿಕದಲ್ಲಿ ಬಂಧನಕ್ಕೊಳಪಟ್ಟ ರಿಮೋಟ್ ಕಂಟ್ರೋಲ್ ಪಾತಕಿ

ಭೂಗತ ಪಾತಕಿ ರವಿಪೂಜಾರಿ ಎರೆಸ್ಟ್ : ಆಫ್ರಿಕದಲ್ಲಿ ಬಂಧನಕ್ಕೊಳಪಟ್ಟ ರಿಮೋಟ್ ಕಂಟ್ರೋಲ್ ಪಾತಕಿ
ಮಂಗಳೂರು, ಜನವರಿ 31 : ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಎರೆಸ್ಟ್ ಅಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಶೂಟ್ ಔಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿಯನ್ನ ಪೊಲೀಸರು ಮೋಸ್ಟ ವಾಂಟೆಂಡ್ ಪಟ್ಟಿಯಲ್ಲಿ ಸೇರಿಸಿದ್ದು, ಇವನ ಬಂಧನಕ್ಕೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸನ್ನು ಜಾರಿ ಮಾಡಲಾಗಿತ್ತು.

ಈತ ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ಹೊಂದಿದ್ದು, ಇದಕ್ಕಾಗಿ ಯುವಕರ ಪಡೆಯನ್ನೇ ಇಟ್ಟುಕೊಂಡಿದ್ದ ಮಾತ್ರವಲ್ಲ ಪೊಲೀಸ್ ಇಲಾಖೆಯೊಂದಿಗೂ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದ.
ಉಡುಪಿ ಮಲ್ಪೆ ಕಲ್ಮಾಡಿಯ ಸೂರ್ಯ ಪೂಜಾರಿ ಮಗ ರವಿ ಪೂಜಾರಿ. ಅರ್ಧದಲ್ಲಿಯೇ ಶಾಲೆ ಬಿಟ್ಟು ಮುಂಬೈಗೆ ಹೋಗಿ ಡ್ಯಾನ್ಸ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದ ಅಲ್ಲಿಂದ ಚೋಟಾರಾಜನ್, ಗುರುಸಾಟಂ ಜತೆ ನಿಕಟ ಸಂಪರ್ಕ ಬಂದ ಬಳಿಕ ಬಾಳಾ ಜಾಲ್ತೆಯ ಕೊಲೆ ಮಾಡಿದ.
1996ರಲ್ಲಿ ಚೋಟಾ ರಾಜನ್, ಗುರು ಸಾಟಂ ಜತೆ ವಿದೇಶಕ್ಕೆ ತೆರಳಿದ. ತಾನು ಸ್ವತಂತ್ರ್ಯ ಡಾನ್ ಎಂದು ಹೇಳುತ್ತಿದ್ದ ರವಿ ಪೂಜಾರಿ, ಆಗಾಗ, ಮುಂಬೈ ಮಾಧ್ಯಮಕ್ಕೆ ಮತ್ತು ಮಂಗಳೂರಿನ ಮಾಧ್ಯಮ ಕೇಂದ್ರಗಳಿಗೆ ಕರೆ ಮಾಡಿ ಕೊಲೆ, ಕೊಲೆ ಬೆದರಿಕೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ಸಚಿವರು, ಉದ್ಯಮಿಗಳು ಸೇರಿ ಸಾಕಷ್ಟು ಮಂದಿಗೆ ಜೀವಬೆದರಿಕೆ ಹಾಕಿರುವ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದೇಶಾದ್ಯಂತ ಒಟ್ಟು 102 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 80ಕ್ಕೂ ಮಿಕ್ಕಿ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲೇ ಇವೆ. ಮಂಗಳೂರಿನಲ್ಲಿ 2009ರಲ್ಲಿ ಲಾಯರ್ ನೌಷಾದ್ ಶೂಟೌಟ್ ಪ್ರಕರಣದಲ್ಲಿ ಈತನ ಕೈವಾಡ ಕೇಳಿಬಂದಿತ್ತು. ಇವಲ್ಲದೇ, ಉದ್ಯಮಿಗಳಿಗೆ ಬೆದರಿಕೆ, ಹಫ್ತಾ ವಸೂಲಿ ಹಾಗೂ ಕೊಲೆ ಸಂಚು ಸಂಬಂಧಿಸಿ 20 ಅಧಿಕ ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗಿವೆ ಎನ್ನಲಾಗಿದೆ.
ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಂಬೈ ಹಾಗೂ ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಪ್ರಕರಣಗಳು ದಾಖಲಾಗಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶ-ವಿದೇಶಗಳಿಂದ ರಿಮೋಟ್ ಮೂಲಕ ನಿಯಂತ್ರಿಸುತ್ತಿದ್ದ ಭೂಗತ ಚಟುವಟಿಕೆಗಳನ್ನು ಮಟ್ಟ ಹಾಕಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದರು.
ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ರವಿ ಪೂಜಾರಿಯ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವುದು ಖಚಿತವಾಗಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.