Connect with us

    FILM

    ಕೊಡಗು ಜಲಪ್ರಳಯದ ಕುರಿತು ರಶ್ಮಿಕಾ ಮಂದಣ್ಣರವರ ಭಾವನಾತ್ಮಕ ಪತ್ರ

    ಕೊಡಗು ಜಲಪ್ರಳಯದ ಕುರಿತು ರಶ್ಮಿಕಾ ಮಂದಣ್ಣರವರ ಭಾವನಾತ್ಮಕ ಪತ್ರ

    ಬೆಂಗಳೂರು ಅಗಸ್ಟ್ 23 : ಜಲಪ್ರಳಯದಿಂದ ತತ್ತರಿಸಿದ್ದ ಕೊಡುಗು ಜಿಲ್ಲೆಯ ಸಂಕಷ್ಟವನ್ನು ನೆನೆದು ನಟಿ ರಶ್ಮಿಕಾ ಮಂದಣ್ಣ ಪತ್ರ ಬರೆದಿದ್ದು ಅದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

    ಕಳೆದ ಒಂದು ವಾರದಿಂದ ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪರಿಸ್ಥಿತಿಗೆ ಸ್ವತಃ ಕೊಡಗಿನವರಾದ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದು, ತಮ್ಮ ತವರು ಕೊಡಗಿನ ದುಸ್ಥಿತಿ ಬಗ್ಗೆ ಭಾವನಾತ್ಮಕ ಪತ್ರ ಬರೆದು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

    ರಶ್ಮಿಕಾ ಮದಣ್ಣರವರ ಪತ್ರ ಈ ರೀತಿ ಇದೆ.

    ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು…. ನಾ ಹುಟ್ಟಿದ, ಬೆಳೆದ ಆಡಿದ್ದ ಓದಿದ್ದ ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ, ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರು ಪಾಲಾಗಿದ್ದಾರೆ ಇದಕ್ಕೆ ಮೂಗಜೀವಿಗಳು ಹೊರತಾಗಿಲ್ಲ, ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ, ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ!ನಾನು, ನೀನು, ನಂದು, ನಿಂದು, ಮೇಲು ಕೀಳು, ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ, ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ದ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರು ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೆ ಉತ್ತರಿಸು. ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ….. ನೀರು ನೀರು ನೀರು ಬಿಟ್ಟರೆ ಕಣ್ಣೀರು. ‘ಧೈರ್ಯವಾಗಿರಿ ನಾವಿದ್ದೇವೆ’ ಎಂಬ ನಿಮ್ಮುಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ. ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು ಪ್ರಪಂಚದ ಮೂಲೆಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ ಮಾಡುತ್ತಿದ್ದೀರಿ,ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರುಲಕ್ಷಗಳನ್ನು ಕೊಡಗಿನ ಸಂತ್ರಸ್ತರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ, ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ…. ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ, ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನನಿರ್ಮಿಸಬೇಕಾಗಿದೆ, ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ. –ರಷ್ಮಿಕ ಮಂದಣ್ಣ

    Share Information
    Advertisement
    Click to comment

    You must be logged in to post a comment Login

    Leave a Reply