LATEST NEWS
ನಿರ್ಲಕ್ಷ್ಯದ ಕಾರು ಚಲಾವಣೆ – ಇಬ್ಬರು ಪೊಲೀಸರಿಗೆ ಗಾಯ – ಚಾಲಕ ಈಗ ಪೊಲೀಸ್ ಅತಿಥಿ

ನಿರ್ಲಕ್ಷ್ಯದ ಕಾರು ಚಲಾವಣೆ – ಇಬ್ಬರು ಪೊಲೀಸರಿಗೆ ಗಾಯ – ಚಾಲಕ ಈಗ ಪೊಲೀಸ್ ಅತಿಥಿ
ಮಂಗಳೂರು ಅಗಸ್ಟ್ 25: ನಗರದಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಇಬ್ಬರು ಸಂಚಾರಿ ಪೊಲೀಸರಿಗೆ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ್ದ ಕಾರನ್ನು ಕದ್ರಿ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ.
ಕೇರಳ ನೊಂದಾಯಿತ KL 14P 4758 ನಂಬರ್ ನ ಕಾರು ನಗರದ ಪಂಪ್ ವೆಲ್ ನಲ್ಲಿ ಮಂಗಳೂರು ನಗರ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಂಚಾರಿ ಪೊಲೀಸರು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಆದೇಶಕ್ಕೆ ಕ್ಯಾರೆ ಅನ್ನದೆ ಸಂಚಾರಿ ನಿಯಮಗಳನ್ನು ತೂರಿ ಕಾರು ಚಾಲಕ ಕಾರನ್ನು ವೇಗವಾಗಿ ಜ್ಯೋತಿ ವೃತ್ತ ದಾಟಿ ಬಂಟ್ಸ್ ಹಾಸ್ಟೆಲ್ ಮೂಲಕ ಪಿವಿಎಸ್ ತಲುಪಿದ್ದಾನೆ.

ಪಿವಿಎಸ್ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಂಚಾರಿ ಪೊಲೀಸರೂ ಕೂಡ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಅಲ್ಲೂ ಕೂಡ ಕಾರನ್ನು ವೇಗವಾಗಿ ಚಲಾಯಿಸಿ ಪೊಲೀಸರಿಂದ ತಪ್ಪಿಸಿ ಮುಂದೆ ಹೋಗಿದ್ದಾನೆ. ಬಳಿಕ ಅಲ್ಲಿಂದ ಮುಂದೆ ಸಾಗಿದ ಕಾರು ಲಾಲ್ ಭಾಗ್ ನಲ್ಲಿರುವ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ಕದ್ರಿಗೆ ತಲುಪಿದೆ.
ಕೇರಳದಿಂದ ಬಂದ ಕಾರು ಕದ್ರಿ ಸರ್ಕ್ಯೂಟ್ ಹೌಸ್ ತಲುಪುತ್ತಿದ್ದಂತೆ ಸಂಚಾರಿ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಅಲರ್ಟ್ ಆಗಿದ್ದು, ಬ್ಯಾರಿಕೇಡ್ ಹಾಕಿ ಕಾರನ್ನು ತಡೆಯಲು ಯತ್ನ ನಡೆಸಿದ್ದಾರೆ. ಈ ವೇಳೆ ಗಜೇಂದ್ರ ಮತ್ತು ನಾರಪ್ಪ ಅವರ ಸಿಗ್ನಲ್ ನ್ನು ಲೆಕ್ಕಿಸದೇ ಬ್ಯಾರಿಕೇಡ್ ಮುರಿದು ಕಾರನ್ನು ನುಗ್ಗಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮೆರೆದ ಗಜೇಂದ್ರ ಮತ್ತು ನಾರಪ್ಪ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಯುವಕ ಮತ್ತು ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿರ್ಲಕ್ಷ್ಯದ ಕಾರು ಚಾಲನೆ ಹಿನ್ನಲೆಯಲ್ಲಿ ಕಾರು ಚಾಲಕ ಕಾಸರಗೋಡು ನಿವಾಸಿ ಮಹಮ್ಮದ್ ಕುಂಞ(18)ನ್ನು ಪೊಲೀಸರು ಬಂಧಿಸಿದ್ದಾರೆ.
ಈ ವೇಳೆ ಸಂಚಾರಿ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ. ಗಂಜೇಂದ್ರ ಅವರಿಗೆ ಹೆಚ್ಚಿನ ಗಾಯಗಳಾಗಿದ್ದರೆ, ನಾರಪ್ಪ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.