Connect with us

    LATEST NEWS

    ಆಳ್ವಾಸ್ ನುಡಿಸಿರಿಯಲ್ಲಿ ಕಂಬಳ ಕೋಣಗಳ ರಾಂಪ್ ನಡಿಗೆ : ಸೆಲ್ಫಿಗಾಗಿ ಮುಗಿ ಬಿದ್ದ ಜನತೆ

    ಆಳ್ವಾಸ್ ನುಡಿಸಿರಿಯಲ್ಲಿ ಕಂಬಳ ಕೋಣಗಳ ರಾಂಪ್ ನಡಿಗೆ : ಸೆಲ್ಫಿಗಾಗಿ ಮುಗಿ ಬಿದ್ದ ಜನತೆ

    ಮಂಗಳೂರು,ಡಿಸೆಂಬರ್ 02 : ಅಲ್ಲಿದ್ದುವು ಬಾಡಿ ಬಿಲ್ಡರ್‌ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ಪ್ರದರ್ಶಿಸುತ್ತಿರುವ ಕಂಬಳದ ಕೋಣಗಳು.

    ಅಂತಿಂತ ಕೋಣಗಳಲ್ಲ ತುಳುನಾಡಿ ಜನಪದ ಕ್ರೀಡೆ ಕಂಬಳದ ಗದ್ದೆಯಲ್ಲಿ ಸ್ಪರ್ಧಾಳುಗಳಾಗಿ ಓಡುವ ಕಂಬಳ ಓಟದ ಕೋಣಗಳು ಅವು.

    ಕಂಬಳ ಗದ್ದೆಯಲ್ಲಿ ಓಡಬೇಕಾಗಿದ್ದ ಈ ಕೋಣಗಳು ಶೃಂಗಾರಗೊಂಡು ರಾಂಪ್ ನಡಿಗೆಗೆ ಸಿದ್ದವಾಗಿ ನಿಂತಿದ್ದವು.

    ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ತಮ್ಮ ಸೌಂದರ್ಯವನ್ನು ನೆರೆದವರ ಮುಂದೆ ಪ್ರದರ್ಶಿಸುತ್ತಿದ್ದುವು. ಹೌದು ಈ ದೃಶ್ಯ ಕಂಡುಂದಿದ್ದು ಜೈನಕಾಶಿ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿಯಲ್ಲಿ.

    ಆಳ್ವಾಸ್ ನುಡಿಸಿರಿ 2017 ರ ಭಾಗವಾಗಿರುವ ಕೃಷಿಸಿರಿಯಲ್ಲಿ ಈ ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು.

    ಆ ಜೋಡಿಗಳ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ನೋಡಲು ಜನತೆ ಮುಗಿ ಬೀಳುತ್ತಿತ್ತು.

    ಮಾತ್ರವಲ್ಲ ಅವುಗಳ ಜೊತೆ ಸೆಲ್ಫಿ ಕೂಡ ತೆಗೆಯುತ್ತಿದ್ದರು. ಕೃಷಿಸಿರಿ ಸಮ್ಮೇಳನದ ಭಾಗವಾಗಿ ಕಂಬಳ ಓಟದ ಕೋಣಗಳ ಈ ಸೌಂದರ್ಯ ಸ್ಫರ್ಧೆ ಆಯೋಜಿಸಲಾಗಿತ್ತು.
    ಸ್ಪರ್ಧೆಯಲ್ಲಿ ಭಾಗಿಯಾದ ಈ ಕೋಣಗಳನ್ನು ಕಟ್ಟುಮಸ್ತಾದ ದೇಹ ಸೌಂದರ್ಯದೊಂದಿಗೆ ಕಂಬಳದಂದು ಓಟಕ್ಕೆ ಸಿದ್ದತೆ ಪಡಿಸುವಂತೆ ಶೃಂಗಾರಗೊಳಿಸಲಾಗಿತ್ತು.

    ಎಲ್ಲಾ ಜೋಡಿಗಳನ್ನು ದೇಹ ಸೌಂದರ್ಯ ಹಾಗೂ ಶೃಂಗಾರಗೊಳಿಸಿದ ರೀತಿಯಿಂದ ತೀರ್ಪಗಾರರು ಗುರುತಿಸಿ ಪಾರಿತೋಷಕಗಳನ್ನು ನೀಡಲಾಯಿತು.

    ಪ್ರಥಮ ಸ್ಥಾನಕ್ಕೆ 50 ಸಾವಿರ, ದ್ವಿತೀಯ ಸ್ಥಾನಕ್ಕೆ 30 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 20 ಸಾವಿರ ಹೀಗೆ ಒಟ್ಟು ಒಂದು ಲಕ್ಷದ ರೂಪಾಯಿ ಬಹುಮಾನ ಇಡಲಾಗಿತ್ತು.

    ಕನ್ನಡ ನುಡಿಸಿರಿಯ ಕಾರ್ಯಕ್ರಮದಲ್ಲೂ ಕಂಬಳದ ಕೋಣಗಳಿಗೆ ತಮ್ಮ ಸೌಂದರ್ಯವನ್ನು ಪ್ರದರ್ಶಿಸಲು ಸಂಘಟಕರು ಅನುವು ಮಾಡಿಕೊಟ್ಟಿದ್ದು ಕೋಣಗಳ ಮಾಲಕರಿಗೂ ಖುಷಿತಂದಿತ್ತು.

    ಕಂಬಳದಲ್ಲಿ ಮಾತ್ರ ಈ ಕೋಣಗಳನ್ನು ನೋಡುತ್ತಿದ್ದ ಜನರಿಗೆ ಇದೀಗ ಕೃಷಿಸಿರಿಗೂ ಬಂದಿರುವುದನ್ನು ಕಂಡು ಖುಷಿಪಟ್ಟರು.

    ಕೆಲವರಂತೂ ಕಂಬಳದ ಕೋಣಗಳ ಜೊತೆ  ಸೆಲ್ಫಿ ತೆಗೆದು ಸಂಭ್ರಮಿಸಿದರು.

    ಒಟ್ಟಿನಲ್ಲಿ ತುಳುನಾಡಿ ಜನಪದ ಕ್ರೀಡೆ ಕಂಬಳದ ಕೋಣಗಳು ಸಾಹಿತ್ಯ ಸಮ್ಮೇಳದಲ್ಲೂ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ಕನ್ನಡದ ಕಂಪಿನೊಂದಿಗೆ ಕಂಬಳದ ಕಂಪನ್ನು ಪಸರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *