LATEST NEWS
ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚನೆ – ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಆರೆಸ್ಟ್
ಮಂಗಳೂರು ಮಾರ್ಚ್ 29: ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ಮಂಗಳೂರು ವಿವಿ ಪ್ರಾದ್ಯಾಪಕರೊಬ್ಬರಿಂದ ಹಣ ವಸೂಲಿ ಮಾಡಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕರಾಗಿರುವ ವಿವೇಕ ಆಚಾರ್ಯ ಎನ್ನುವವರಿಗೆ ರಾಮಸೇನೆಯ ಪ್ರಸಾದ್ ಅತ್ತಾವರ ತನಗೆ ರಾಜ್ಯದ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ ಅವರೊಂದಿಗೆ ತುಂಬಾ ಸಲುಗೆಯಲ್ಲಿದ್ದೇವೆ ಬೇಕಾದ ಕೆಲಸ ಮಾಡಬಲ್ಲೆ ಎಂದು ನಂಬಿಕೆ ಹುಟ್ಟಿಸಿದ್ದಾನೆ, ಅಲ್ಲದೆ ನಿಮಗೆ ರಾಯಚೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ, ಈ ಹಿನ್ನಲೆ ವಿವೇಕ್ ಆಚಾರ್ಯ ಅವರು ಪ್ರಸಾದ್ ಅತ್ತಾವರ ಅವರಿಗೆ 17.5 ಲಕ್ಷ ರೂ ಹಣವನ್ನು ನೀಡಿದ್ದು. ಉಳಿದ ಹಣಕ್ಕೆ ಪ್ರಸಾದ್ ಅತ್ತಾವರ 3 ಖಾಲಿ ಚೆಕ್ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ.
ಈ ನಡುವೆ ಹಣ ಪಡೆದು ಒಂದು ವರ್ಷವಾದರೂ ಕೂಡ ವಿವಿಯಲ್ಲಿ ಕುಲಪತಿ ಹುದ್ದೆ ಕೊಡಿಸುವಲ್ಲಿ ವಿಫಲನಾದ ಹಿನ್ನಲೆ ವಿವೇಕ ಆಚಾರ್ಯ ಅವರು ಹಣ ಮರಳಿ ಕೊಡಲು ಆಗ್ರಹಿಸಿದ್ದಾರೆ. ಆದರೆ ಮರಳಿ ಹಣ ಕೇಳಿದಾಗ ಹಣ ಕೊಡದೇ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆ ವಿವೇಕ ಆಚಾರ್ಯ ಅವರು ಹಣವನ್ನು ಪಡೆದು ವಂಚಿಸಿದ ಬಗ್ಗೆ ಪ್ರಸಾದ್ ಅತ್ತಾವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.