UDUPI
ರಾಮಮಂದಿರ ಶಿಲಾನ್ಯಾಸಕ್ಕೆ ಉಡುಪಿಯಿಂದ ಹೊರಟಿದೆ ನೀರು ಮಣ್ಣು

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ದಿನಗಣನೆ ಆರಂಭವಾಗಿದೆ. ಮಂದಿರ ಶಿಲಾನ್ಯಾಸದ ಪ್ರಕ್ರಿಯೆಗಳು ದೇಶದಾದ್ಯಂತ ಚುರುಕಿನಿಂದ ಆಗುತ್ತಿದೆ. ಆಗಸ್ಟ್ 5ರಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯಲಿದ್ದು, ಶಿಲಾನ್ಯಾಸದ ಸಂದರ್ಭ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರು ಬಳಸಲಾಗುತ್ತದೆ.
ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಶ್ರೀಕೃಷ್ಣ ನಗರಿ ಉಡುಪಿಯಿಂದ ಪವಿತ್ರ ಮೃತ್ತಿಕೆ ಆಯೋಧ್ಯೆಗೆ ಹೊರಟಿದೆ.
ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು ಸೇರಿಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ .

ಅದರಂತೆ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಗಂಧ ಪ್ರಸಾದ , ನಿರ್ಮಾಲ್ಯವಿಟ್ಟು ಮಂಗಳಾರತಿ ಬೆಳಗಿ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಅತ್ಯಂತ ಯಶಸ್ವಿಯಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ವಿಹಿಂಪ ದ ಉಡುಪಿಯ ಪ್ರಮುಖರಿಗೆ ಸೋಮವಾರ ಹಸ್ತಾಂತರಿಸಿದರು . ಉಡುಪಿಯ ಪವಿತ್ರ ನೀರು ಮತ್ತು ಮಣ್ಣನ್ನು ಕೃಷ್ಣ ಮಠದ ಗರ್ಭಗುಡಿಯ ಮುಂಭಾಗ ಇಟ್ಟು ಪರ್ಯಾಯ ಸ್ವಾಮೀಜಿಯವರು ವಿಶೇಷ ಪೂಜೆ ನೆರವೇರಿಸಿದರು.
ಸಂಗ್ರಹಿಸಿ ಪೂಜಿಸಿದ ಮಣ್ಣು ನೀರನ್ನು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಗಂಧ ಪ್ರಸಾದವನ್ನು ಇಟ್ಟು ಶ್ರೀಗಳು ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಸ್ವಾಮೀಜಿ ಹಸ್ತಾಂತರಿಸಿದರು. ಆಗಸ್ಟ್ 5ರಂದು ನಡೆಯುವ ಮಂದಿರ ಶಿಲಾನ್ಯಾಸ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ದೇಶದ ಪವಿತ್ರ ಪ್ರಸಿದ್ಧ ಕ್ಷೇತ್ರಗಳಿಂದ ಬಂದ ನೀರು ಮತ್ತು ಮಣ್ಣನ್ನು ಶಿಲಾನ್ಯಾಸ ಸಂದರ್ಭ ಬಳಸಲಾಗುತ್ತದೆ.