DAKSHINA KANNADA
ಮನೆಗಳಿಗೆ ನುಗ್ಗಿದ ಮಳೆನೀರು, ಮಂಗಳೂರು ಏರ್ ಪೋರ್ಟ್ ಆಡಳಿತ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ..!
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(mangalore Airport) ಆಡಳಿತದ ವಿರುದ್ದ ಸ್ಥಳೀಯ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಏರ್ಪೋರ್ಟ್ ಗೆ ಸಾಗುವ ಮುಖ್ಯ ಪ್ರವೇಶ ದ್ವಾರ ಬಂದ್ ಮಾಡಿ ಸ್ಥಳೀಯ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಏರ್ಪೋರ್ಟ್ ಆಡಳಿತದ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಏರ್ಪೋರ್ಟ್ ಗೆ ಯಾವುದೇ ವಾಹನ ತೆರಳದಂತೆ ತಡೆಯೊಡ್ಡಿದರು. ಏರ್ಪೋರ್ಟ್ ನ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದೇ ಮಳೆ ನೀರು ಕೆಂಜಾರು ಹಾಗೂ ಏರ್ಪೋರ್ಟ್ ಸುತ್ತಮುತ್ತಲಿನ ಹಲವು ಮನೆಗಳಿಗೆ ನುಗ್ಗಿ ನೆರೆ ಭೀತಿ ಎದುರಾಗಿದೆ.
ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಆಡಳಿತ ಹೊರ ಬಿಟ್ಟು ಜನರಿಗೆ ತೊಂದರೆ ನೀಡುತ್ತಿದೆ. ಮಧ್ಯರಾತ್ರಿ ಮನೆಗಳಿಗೆ ನೀರು ನುಗ್ಗುತ್ತಿದ್ದು ಪುಟ್ಟ ಮಕ್ಕಳು, ಅಬಲೆ ವೃದ್ದೆಯರು ಪಡಬಾರದ ಕಷ್ಟವನ್ನು ಪಡುತ್ತಿದ್ದು, ಏರ್ ಪೋರ್ಟ್ ಅಧಿಕಾರಿಗಳ ಗಮನಕ್ಕೆ ತಂದ್ರೂ ಕ್ಯಾರೇ ಮಾಡುತ್ತಿಲ್ಲ ಎಂದು ಆರೋಪಿಸಿದರು. ಗ್ರಾಮಸ್ಥರು ಏಕಾಏಕಿ ರಸ್ತೆಗಿಳಿದು ವಾಹಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಿದ ಮಾಹಿತಿ ಪಡೆದ ಬಜ್ಪೆ ಪೊಲೀಸರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರ ಮನವೊಲಿಸಿ ಪರಿಹಾರ ಭರವಸೆ ನೀಡಿದರೂ ಗ್ರಾಮಸ್ಥರು ಮಣಿಯದೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು ಗಡುವು ನೀಡಿದ್ದಾರೆ.