Connect with us

  DAKSHINA KANNADA

  ಮಂಗಳೂರು: ಹಾಲು ದರ ಏರಿಕೆ ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ

  ಮಂಗಳೂರು, ಜುಲೈ 01: ಅವೈಜ್ಞಾನಿಕವಾಗಿ ಹಾಲಿನ ದರ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮಿನಿ ವಿಧಾನಸೌಧದ ಬಳಿ ಸಾರ್ವಜನಿಕರಿಗೆ ಹಾಲು ರಹಿತ ಚಹಾ ವಿತರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

  ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತಾನಾಡಿದ ಜಿಲ್ಲಾ ಕಾರ್ಯದರ್ಶಿ ಹಾಗೂ ಪಾಲಿಕೆ ಸದಸ್ಯೆ ಪೂರ್ಣಿಮಾ ರವರು, ಈ ಕಾಂಗ್ರೆಸ್ ಸರಕಾರದಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ದಿನ ಬೆಳಗಾದರೆ ಬೆಲೆ ಏರಿಕೆಯ ಸುದ್ದಿಯೇ ಇರುತ್ತದೆ ಎಂದರು.

  ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್ ಮಾತನಾಡಿ, ಗ್ಯಾರೆಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಬೆಲೆ ಏರಿಕೆಯ ಗ್ಯಾರಂಟಿ ನೀಡಿ ಜನರ ಬದುಕನ್ನು ದುಸ್ತರಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಸರಕಾರಕ್ಕೆ ಗೃಹಿಣಿಯರೇ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

  ಶಾಸಕರಾದ ವೇದವ್ಯಾಸ್ ಕಾಮತ್ ರವರು ಮಾತನಾಡಿ, ಒಂದು ವರ್ಷದೊಳಗೆ ಎರಡನೇ ಬಾರಿ ಹಾಲಿನ ದರ ಹೆಚ್ಚಿಸಲಾಗಿದೆ. ಹೆಚ್ಚಳವಾದ ಹಣ ರೈತರಿಗಾಗಲೀ, ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುವವರಿಗಾಗಲೀ ಸಿಗುತ್ತಿಲ್ಲ. ಹಾಗಾದರೆ ಜನಸಾಮಾನ್ಯರಿಂದ ಕೊಳ್ಳೆ ಹೊಡೆದ ಹೆಚ್ಚುವರಿ ದುಡ್ಡು ಎಲ್ಲಿ ಹೋಯಿತು? ಯಾರ ಖಜಾನೆ ಸೇರಿತು? ಯಾವ ರಾಜ್ಯಗಳ ಚುನಾವಣಾ ಖರ್ಚಿಗೆ ಬಳಕೆಯಾಯಿತು? ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

  ಪ್ರತಿಭಟನೆಯಲ್ಲಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಪ್ರಮುಖರಾದ ಮೋನಪ್ಪ ಭಂಡಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ವಿಜಯಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್, ರವಿ ಶಕ್ತಿನಗರ, ಮಂಡಲದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕಮಲಾಕ್ಷಿ, ಶಬರಿ ಸೇರಿದಂತೆ ಪಾಲಿಕೆ ಸದಸ್ಯರು, ಮಹಿಳಾ ಮೋರ್ಚಾದ ವಿವಿಧ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು .

  Share Information
  Advertisement
  Click to comment

  You must be logged in to post a comment Login

  Leave a Reply