KARNATAKA
‘ಹಾಸನ’ವನ್ನೇ ಅಲ್ಲಾಡಿಸಿದ ವರುಣ, ಸಕಲೇಶಪುರದಲ್ಲಿ ಭೂಮಿಯೊಂದಿಗೆ ಪಾತಾಳ ಸೇರಿದ ರಸ್ತೆ..!
ಹಾಸನ: ಮಂಗಳವಾರದ ಮಳೆ ಹಾಸನ ಜಿಲ್ಲೆಯನ್ನೇ ಅಲ್ಲಾಡಿಸಿದ್ದು ಮಳೆಯಿಂದ ಅನೇಕ ಅನಾಹುತಗಳು ಸಂಭವಿಸಿದೆ. ಹಾಸನದ ಸಕಲೇಶಪುರದ ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತ ಸಂಭವಿಸಿ ಭೂಮಿಯೊಂದಿಗೆ ರಸ್ತೆ ಪಾತಾಳ ಸೇರಿದೆ.
ಸುಮಾರು 200 ಮೀಟರ್ಗೂ ಹೆಚ್ಚು ದೂರ ರಸ್ತೆ ಕೊಚ್ಚಿ ಹೋಗಿದೆ. ರಸ್ತೆಯೇ ಕೊಚ್ಚಿ ಹೋಗಿರುವುದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು ಅನಾಹುತಾಕ್ಕೆ ಇದೇ ಕಾಮಗಾರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಸನ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆಯಿಂದಲೇ ಭಾರೀ ಮಳೆಯಾಗುತ್ತಿದೆ. ಸಕಲೇಶಪುರ ತಾಲ್ಲೂಕಿನ ಹಲವು ಕಡೆ ಸಂಪರ್ಕ ಕಡಿತಗೊಂಡಿದೆ. ಮಳೆಗೆ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮುಳುಗಡೆ ಹಿನ್ನೆಲೆ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.ಸಕಲೇಶಪುರ ತಾಲ್ಲೂಕಿನ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿ ಅವಾಂತರ ಸೃಷ್ಟಿಯಾಗಿದೆ. ದಾರಿಗಳೇ ಜಲಾವೃತವಾಗಿ ಜನರ ಆತಂಕ ಹೆಚ್ಚಾಗಿದೆ. ಜನರ ಪರದಾಟದ ನಡುವೆಯೂ ಜಿಲ್ಲಾಡಳಿತ ರಜೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. ಭಾರಿ ಮಳೆಯ ನಡುವೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿದೆ.ಹಾಸನ ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಬಿ ಹರಿಯುತ್ತಿರುವ ನದಿ ತೊರೆಗಳನ್ನು ಹಾದುಕೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಹೋಗಬೇಕಾಗಿದೆ.